ಕಳಸ:ಅರಣ್ಯ ಕಾಯ್ದೆಗಳಿಂದ ಕೃಷಿಕರಿಗೆ ವಿಪರೀತ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಇಲ್ಲಿನ ಕಳಸ ರೈತ ಕಾರ್ಮಿಕರ ಹಿತರಕ್ಷಣಾ ಸಮಿತಿ ಇದೇ 12ರಂದು ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಸಲಿದೆ.
ಕಳಸ ತಾಲ್ಲೂಕಿನ ಕಳಕೋಡು, ಮರಸಣಿಗೆ, ಹೊರನಾಡು, ಇಡಕಿಣಿ, ಸಂಸೆ, ತನೂಡಿ, ಮಾವಿನಕೆರೆ ಗ್ರಾಮ ವ್ಯಾಪ್ತಿಯಲ್ಲಿ 1500 ಎಕರೆಗೂ ಹೆಚ್ಚು ಭೂಮಿಯನ್ನು ಮೀಸಲು ಅರಣ್ಯ ಎಂದು ಘೋಷಿಸಲು ತಯಾರಿ ನಡೆದಿದೆ.ಕಂದಾಯ ಭೂಮಿಯನ್ನು ಮೀಸಲು ಅರಣ್ಯ ಮಾಡುವ ಹುನ್ನಾರವನ್ನು ಖಂಡಿಸಿ ರೈತರು ಒಗ್ಗೂಡಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಕೆ.ಎಲ್. ವಾಸು ತಿಳಿಸಿದ್ದಾರೆ.
ಹಾಗೆಯೇ ತಾಲ್ಲೂಕಿನ ಕಂದಾಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡು ಸಣ್ಣ ಪುಟ್ಟ ಜಮೀನು ಮಾಡಿಕೊಂಡಿರುವ ಕೃಷಿಕರು ಕೂಡ 94 ಸಿ ಅರ್ಜಿ ಸಲ್ಲಿಸಿ ಮನೆ ನಿವೇಶನಕ್ಕಾಗಿ ಕಾದಿದ್ದಾರೆ. ಆದರೆ ಅರಣ್ಯ ಕಾಯ್ದೆಗಳ ಕಾರಣಕ್ಕೆ ಜನರಿಗೆ ಮನೆ ನಿವೇಶನ ಕೂಡ ಮಂಜೂರಾಗಿಲ್ಲ. ಇದರೊಂದಿಗೆ ಫಾರಂ ನಂಬರ್ 53, 57ರಲ್ಲಿ ಕೂಡ ನೂರಾರು ಕೃಷಿಕರು ಭೂಮಿಯ ಹಕ್ಕುಪತ್ರಕ್ಕಾಗಿ ಕಾದಿದ್ದಾರೆ. ಆದರೆ ಇವರಿಗೆ ಅರಣ್ಯ ಇಲಾಖೆ ಅನುಮತಿ ಇಲ್ಲದೆ ದಶಕಗಳಿಂದ ಹಕ್ಕುಪತ್ರ ಸಿಕ್ಕಿಲ್ಲ ಎಂದು ವಾಸು ಬೇಸರಿಸಿದ್ದಾರೆ.
ಕಳಸ ತಾಲ್ಲೂಕಿನಲ್ಲಿ ಕೂಡ 400 ಫಲಾನುಭವಿಗಳ ಭೂ ಮಂಜೂರಾತಿ ಕ್ರಮ ಎಂದು ಕಂದಾಯ ಇಲಾಖೆ ಹೇಳಿದೆ. ಆದರೆ ಇದರಲ್ಲಿ ಕೂಡ ದೊಡ್ಡ ಸಂಖ್ಯೆಯ ಬಡವರು ಇದ್ದು ಅವರಿಗೆ ನ್ಯಾಯ ಒದಗಿಸಲೇಬೇಕು. ಈ ಎಲ್ಲ ಅಂಶ ಪರಿಗಣಿಸಿ ಅರಣ್ಯ ಇಲಾಖೆ ವಿರುದ್ಧ ಇದೇ 12ರಂದು ಪ್ರತಿಭಟನಾ ಮೆರವಣಿಗೆ ನಡೆಸಿ ವಲಯ ಅರಣ್ಯಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಲಾಗುತ್ತದೆ ಎಂದು ವಾಸು ತಿಳಿಸಿದ್ದಾರೆ.
