ಕಳಸ:5 ತಿಂಗಳ ಚಾರಣದ ಸ್ಥಗಿತದ ನಂತರ ಇದೀಗ ಜೂನ್ 1ರಿಂದ ಕುದುರೆಮುಖ ಗಿರಿಶ್ರೇಣಿ ವ್ಯಾಪ್ತಿಯ ಕುದುರೆಮುಖ, ನೇತ್ರಾವತಿ, ಬಂಡಾಜೆ, ಗಂಗಡಿಕಲ್ಲು, ಮತ್ತಿತರ ಪ್ರದೇಶಗಳಿಗೆ ಚಾರಣಕ್ಕೆ ಅನುಮತಿ ನೀಡಲಾಗಿದೆ.
ಅರಣ್ಯದಲ್ಲಿ ಜನಜಂಗುಳಿ ತಡೆಯಲು ಈ ತಾಣಗಳಿಗೆ ಪ್ರತಿದಿನಕ್ಕೆ 300 ಜನರಿಗೆ ಮಾತ್ರ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ.ಚಾರಣಕ್ಕೆ ಆನ್ಲೈನ್ ಮೂಲಕ ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕವೇ ಬುಕಿಂಗ್ ಮಾಡಲಾಗುತ್ತದೆ. ಆದರೆ ಅಚ್ಚರಿ ಎಂದರೆ ಆನ್ಲೈನ್ ಬುಕಿಂಗ್ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಎಲ್ಲ 300 ಟೆಕೆಟ್ಗಳು ಕೂಡ ಖಾಲಿ ಆಗುತ್ತಿವೆ. ಇದು ಚಾರಣಿಗರಲ್ಲಿ ಅಚ್ಚರಿ ಮತ್ತು ನಿರಾಶೆ ತರುತ್ತಿದೆ.
ಆದರೆ ಹೀಗೆ ಕೆಲವೇ ನಿಮಿಷಗಳಲ್ಲಿ ಎಲ್ಲ ಟಿಕೆಟ್ ಕೂಡ ಬುಕಿಂಗ್ ಆಗುತ್ತಿರುವ ಹಿಂದೆ ಬೆಂಗಳೂರಿನ ಟ್ರಾವೆಲ್ಸ್ ಸಂಸ್ಥೆಗಳ ಕೈವಾಡ ಇದೆ ಎಂದು ಸ್ಥಳೀಯರು ದೂರುತ್ತಾರೆ.ಜೂನ್ 6ರ ಚಾರಣಕ್ಕೆ ಮೇ 22ರಂದು ವೆಬ್ಸೈಟ್ ಬುಕಿಂಗ್ ಅವಕಾಶ ಕಲ್ಪಿಸಿದಾಗ ನಿಮಿಷದ ಒಳಗೇ ಕುದುರೆಮುಖ ಮತ್ತು ನೇತ್ರಾವತಿಯ 300 ಟಿಕೆಟ್ ಬುಕಿಂಗ್ ಆಗಿದ್ದು ಹೇಗೆ ಎಂಬುದು ಎಲ್ಲರಿಗೂ ಅಚ್ಚರಿ.ಜೂನ್ 13ರ ಚಾರಣದ ಟಿಕೆಟ್ಗಳು ಕೂಡ ಕೆಲವೇ ನಿಮಿಷಗಳಲ್ಲಿ ಬುಕಿಂಗ್ ಆಗಿವೆ.
‘ಬೆಂಗಳೂರಿನ ಖಾಸಗಿ ಟ್ರಾವೆಲ್ ಸಂಸ್ಥೆಗಳು ತಮ್ಮ ಸಂಸ್ಥೆಯ 20-25 ಸಿಬ್ಬಂದಿಯನ್ನು ಏಕಕಾಲಕ್ಕೆ ಬಳಸಿಕೊಂಡು ಒಬ್ಬೊಬ್ಬರ ಮೂಲಕ ತಲಾ 3 ಟಿಕೆಟ್ ಖರೀದಿಸುತ್ತಾರೆ. ಹೀಗೆ ಅಕ್ರಮವಾಗಿ ಟೆಕೆಟ್ ಬುಕಿಂಗ್ ಮಾಡುತ್ತಿದ್ದಾರೆ ಎಂಬ ಆರೋಪ ಕಳಸ ತಾಲ್ಲೂಕಿನ ಹೋಂ ಸ್ಟೇ ಮಾಲೀಕರದ್ದಾಗಿದೆ.

‘ಕುದುರೆಮುಖ ಚಾರಣದ ಪ್ರತಿ ಟೆಕೆಟ್ಗೆ 500 ರೂಪಾಯಿಗೆ ಬುಕಿಂಗ್ ಆದ ನಂತರ ಇದನ್ನು ತಮ್ಮ ಟ್ರಾವೆಲ್ ವಹಿವಾಟಿಗೆ ಬಳಸಿಕೊಂಡು ಲಾಭ ಮಾಡುತ್ತಾರೆ. ಇದರಿಂದ ಪ್ರತಿ ಚಾರಣಿಗನ ಮೇಲೆ ಈ ಸಂಸ್ಥೆಗಳು 2000 ರೂಪಾಯಿಗೂ ಹೆಚ್ಚು ಲಾಭ ಮಾಡುತ್ತಾರೆ. ನಿಜವಾದ ಚಾರಣದಲ್ಲಿ ಆಸಕ್ತಿ ಇದ್ದವರಿಗೆ ಪ್ರತಿ ವಾರವೂ ಟೆಕೆಟ್ ಸಿಗದೆ ಕಳಸ ತಾಲ್ಲೂಕಿನಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತದೆ’ ಎಂದು ಪ್ರಿನ್ಸ್ ಆಫ್ ಕಳಸ ಮಾಲೀಕ ಚಂದ್ರಮೋಹನ್ ದೂರುತ್ತಾರೆ.
ಈ ಬಗೆಯಲ್ಲಿ ಟಿಕೆಟ್ ಬ್ಲಾಕಿಂಗ್ ಮಾಡುವುದನ್ನು ತಡೆಯಲು ಒಬ್ಬರಿಗೆ ಒಂದು ಟಿಕೆಟ್ ಖರೀದಿಗೆ ಮಾತ್ರ ಅವಕಾಶ ನೀಡಬೇಕು. ಆ ಟಿಕೆಟ್ ರದ್ದುಪಡಿಸಿ ಹಣ ವಾಪಸ್ ಪಡೆಯುವ ಅವಕಾಶ ಇರಬಾರದು.ಇದರಿಂದ ನೈಜ ಚಾರಣಿಗರು ಮಾತ್ರ ಬುಕಿಂಗ್ ಮಾಡುತ್ತಾರೆ ಎಂದು ಮಾತೃಶ್ರೀ ಅಡ್ವೆಂಚರ್ ಸಂಸ್ಥೆಯ ಯುವ ಉದ್ಯಮಿ ಸೃಜನ್ ಜೈನ್ ಅಭಿಪ್ರಾಯಪಡುತ್ತಾರೆ.
ನೇತ್ರಾವತಿ ಚಾರಣದ ಪ್ರದೇಶದ ಪರಿಶೀಲನೆಗೆ ಸೋಮವಾರ ಕಾರ್ಕಳ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಬಂದಿದ್ದರು. ಕುದುರೆಮುಖ ಮತ್ತು ನೇತ್ರಾವತಿ ಚಾರಣದ ಟೆಕೆಟ್ ಬುಕಿಂಗ್ ಜಾಲದ ಬಗ್ಗೆ ಪ್ರಶ್ನಿಸಿದಾಗ ಅವರು, ಈ ಬಗ್ಗೆ ದೂರುಗಳು ನಮ್ಮ ಗಮನಕ್ಕೂ ಬಂದಿದೆ. ಇಡೀ ರಾಜ್ಯದ ಚಾರಣಗಳ ಆನ್ಲೈನ್ ಬುಕಿಂಗ್ ನಿರ್ವಹಿಸುವ ಐಸಿಟಿ ಸಂಸ್ಥೆಗೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಟಿಕೆಟ್ ಬುಕಿಂಗ್ ಅಕ್ರಮ ನಡೆಯದಂತೆ ಎಚ್ಚರ ವಹಿಸಲು ಅಗತ್ಯ ಕ್ರಮವನ್ನು ಅವರು ವೆಬ್ಸೈಟ್ನಲ್ಲಿ ಕೈಗೊಳ್ಳಲಿದ್ದಾರೆ ಎಂದರು.
