ಕಳಸ:ಸಂಸೆ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ವಿಶೇಷ ಗ್ರಾಮ ಸಭೆಯಲ್ಲಿ 46 ಫಲಾನುಭವಿಗಳನ್ನು ನಿವೇಶನ ಪಡೆಯಲು ಆಯ್ಕೆ ಮಾಡಲಾಯಿತು.
70ಕ್ಕೂ ಹೆಚ್ಚು ನಿವೇಶನರಹಿತರು 46 ನಿವೇಶನಗಳನ್ನು ಪಡೆಯಲು ಸಭೆಯಲ್ಲಿ ಕಾತರಿಸಿದ್ದರು. ಆದ್ದರಿಂದ ತಾಲ್ಲೂಕು ಪಂಚಾಯಿತಿಯು ಲಾಟರಿ ಮೂಲಕ ಅದೃಷ್ಟವಂತರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಿತು. ಲಾಟರಿ ಮೂಲಕ 46 ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಯಿತು.
ಸಂಸೆ ಗ್ರಾಮದ ಸರ್ವೆ ನಂಬರ್ 294ರಲ್ಲಿ 2.35 ಎಕರೆ ಪ್ರದೇಶವನ್ನು ನಿವೇಶನರಹಿತರಿಗೆಂದು ಗುರುತಿಸಿ ದಶಕವೇ ಕಳೆದಿತ್ತು. ಆದರೆ ಡೀಮ್ಡ್ ಅರಣ್ಯ ಮತ್ತಿತರ ಗಡಿ ಗುರುತು ಸಮಸ್ಯೆಯಿಂದಾಗಿ ನಿವೇಶನಕ್ಕೆ ಅಡ್ಡಿ ಆತಂಕ ಎದುರಾಗಿತ್ತು. ನಿವೇಶನರಹಿತರು ಇದೇ ಭೂಮಿಯಲ್ಲಿ ಟೆಂಟ್ ಹಾಕಿ ಪ್ರತಿಭಟನೆಯನ್ನೂ ಮಾಡಿದ್ದರು. ಶಾಸಕಿ ನಯನಾ ಮೋಟಮ್ಮ ಮಧ್ಯಪ್ರವೇಶದಿಂದಾಗಿ ಈ ಭೂಮಿಯಲ್ಲಿ ನಿವೇಶನ ಮಂಜೂರು ಮಾಡಲು ಅವಕಾಶ ಒದಗಿಬಂದಿತ್ತು.
ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುದೀಪ್, ಲಾಟರಿಯಲ್ಲಿ ಆಯ್ಕೆಯಾದ ಫಲಾನುಭವಿಗಳು 15 ದಿನದ ಒಳಗೆ ಅಗತ್ಯ ದಾಖಲಾತಿಗಳ್ನು ಗ್ರಾಮಪಂಚಾಯಿತಿಗೆ ಸಲ್ಲಿಸಬೇಕು.ಆಯ್ಕೆಯಾದ ಫಲಾನುಭವಿಗಳ ಬಗ್ಗೆ ತಕರಾರು ಇದ್ದರೆ ವಾರದೊಳಗೆ ಅರ್ಜಿ ಸಲ್ಲಿಸಬಹುದು ಎಂದರು.
ಪಂಚಾಯಿತಿ ಆಡಳಿತಾಧಿಕಾರಿ ಚೇತನ್,ಅಭಿವೃದ್ಧಿ ಅಧಿಕಾರಿ ವಿಠಲ, ಕಂದಾಯ ನಿರೀಕ್ಷಕ ಲಕ್ಷ್ಮಣ್,ಗ್ರಾಮ ಲೆಕ್ಕಾಧಿಕಾರಿ ಮೆಹಬೂಬ್, ನೋಡಲ್ ಅಧಿಕಾರಿ ಜಿತೇಂದ್ರ ಭಾಗವಹಿಸಿದ್ದರು.
