ಕಳಸ:ಡಿಸೆಂಬರ್ 20ರಂದು ಕರ್ನಾಟಕ ಜಾನಪದ ಪರಿಷತ್ತಿನ ಆಶ್ರಯದಲ್ಲಿ ಕಳಸ ತಾಲ್ಲೂಕು ಜಾನಪದ ಸಮ್ಮೇಳನ ಪಟ್ಟಣದಲ್ಲಿ ನಡೆಯಲಿದೆ.
ಅರಮನೆಮಕ್ಕಿಯ ದಕ್ಷಿಣಕಾಶಿ ಸಭಾಭವನದಲ್ಲಿ ಸಮ್ಮೇಳನ ನಡೆಯಲಿದ್ದು ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಜಾನಪದ ಪರಿಷತ್ತಿನ ಅಧ್ಯಕ್ಷ ರಜಿತ್ ಕೆಳಗೂರು, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ವಿಶ್ವನಾಥ್, ಕನ್ನಡ ಸಾಹಿತ್ಯ ಪರಿಷತ್ತಿನ ಕಳಸ ತಾಲ್ಲೂಕು ಘಟಕದ ಅಧ್ಯಕ್ಷ ಸತೀಶ್ಚಂದ್ರ, ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ ಮತ್ತಿತರರು ಕೆ.ಕೆ.ಬಾಲಕೃಷ್ಣ ಭಟ್ ಅವರ ಮನೆಗೆ ತೆರಳಿ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ ನೀಡಿದರು.

ಇದೇ ಸಂದರ್ಭದಲ್ಲಿ ಸಮ್ಮೇಳನದ ಲೋಗೋ ಬಿಡುಗಡೆ ಮಾಡಲಾಯಿತು. ಕಳಸ ತಾಲ್ಲೂಕಿನ ಜಾನಪದ ಸೊಗಡು, ಭಾಷೆ, ಹಾಡು ಹಬ್ಬ, ವಿಶಿಷ್ಟ ಅಡುಗೆಗಳು, ಸಂಪ್ರದಾಯಗಳನ್ನು ಸಮ್ಮೇಳನದಲ್ಲಿ ಮುನ್ನೆಲೆಗೆ ತರಲು ಉದ್ದೇಶಿಸಲಾಗಿದೆ ಎಂದು ಪರಿಷತ್ತಿನ ಕಾರ್ಯದರ್ಶಿ ಹೆಚ್.ಆರ್.ಪ್ರಶಾಂತ್ ತಿಳಿಸಿದರು.
ಸಮ್ಮೇಳನದ ಯಶಸ್ಸಿಗೆ ಎಲ್ಲ ಸಂಘ ಸಂಸ್ಥೆಗಳು, ಕಳಸ ತಾಲ್ಲೂಕಿನ ಜನತೆ ಸಹಕಾರ ಕೊಡಬೇಕು ಎಂದು ರಜಿತ್ ಕೆಳಗೂರು ಕೋರಿದರು.ಸುಜಯಾ, ಮಹೇಶ್, ಅಶೋಕ್, ಶೇಖರ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
ಕಳಸ ಜಾನಪದ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆ ಆದ ಕೆ.ಕೆ.ಬಾಲಕೃಷ್ಣ ಭಟ್ ಅವರನ್ನು ಜಾನಪದ ಪರಿಷತ್ತಿನ ಪದಾಧಿಕಾರಿಗಳು ಭಾನುವಾರ ಅಭಿನಂದಿಸಿದರು.
