ಕಳಸ:ಇಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿಯು ಪಟ್ಟಣದಲ್ಲಿ ಬುಧವಾರ ಸಂಜೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು.
ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಮತ್ತು ಶಿಕ್ಷಣ ಸಚಿವರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ದೇಶದ ಅತ್ಯಂತ ಪ್ರಮುಖ ಪರೀಕ್ಷೆಗಳ ವಿಚಾರದಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಕಾಪಾಡಬೇಕು ಎಂದು ಪಕ್ಷದ ಮುಖಂಡ ವಿಶ್ವನಾಥ್ ಆಗ್ರಹಿಸಿದರು.
ಬಿಜೆಪಿ ಪಕ್ಷದ ಗೂಂಡಾಗಳು ದೆಹಲಿಯಲ್ಲಿ ಪೊಲೀಸರ ಸೋಗಿನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದರು. ಕೇಂದ್ರದ ಗೃಹಮಂತ್ರಿ ಕೂಡ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಮುಖಂಡ ಹಿತ್ತಲಮಕ್ಕಿ ರಾಜೇಂದ್ರ ಆಗ್ರಹಿಸಿದರು. ಮುಖಂಡರಾದ ಶ್ರೇಣಿಕ, ಪ್ರಭಾಕರ್, ರಫೀಕ್, ವಿಶ್ವನಾಥ್, ರಾಮದೇವ್, ವೀರೇಂದ್ರ, ಶುಕೂರ್, ಭರತ್ರಾಜ್, ಗಣೇಶ್ ಭಟ್,ಮಹೇಶ್, ಚಂದ್ರಮೋಹನ್ ಭಾಗವಹಿಸಿದ್ದರು.
