ಕಳಸ:ಮಲೆನಾಡಿನ ರೈತರಿಗೆ ಮೀಸಲು ಅರಣ್ಯದ ಪುನರ್ ರಚನೆ ಮತ್ತು ಫಾರಂ ನಂಬರ್ 53ರ ಭೂಮಿ ಮಂಜೂರಾತಿ ರದ್ದತಿ ವಿಚಾರದಲ್ಲಿ ಗೊಂದಲ ಮತ್ತು ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕಳಸದಲ್ಲಿ ಸದ್ಯದಲ್ಲೇ ಹೋರಾಟ ರೂಪಿಸಲಾಗುತ್ತದೆ ಎಂದು ಕಳಸ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ತಿಳಿಸಿದರು.
ಕ್ರಿ.ಶ.2000ದಿಂದ ಈಚೆಗೆ ಹಲವಾರು ಕೃಷಿಕರಿಗೆ ಫಾರಂ ನಂಬರ್ 53ರಲ್ಲಿ ಹಕ್ಕುಪತ್ರಗಳು ನೀಡಲಾಗಿದೆ.ಆ ಜಮೀನಿಗೆ ಹಲವಾರು ಬ್ಯಾಂಕುಗಳಲ್ಲಿ ಸಾಲ ಕೂಡ ನೀಡಲಾಗಿದೆ.ಕಳೆದ 25 ವರ್ಷದಲ್ಲಿ ರೈತರು ಆ ಜಮೀನು ಅಭಿವೃದ್ಧಿಪಡಿಸಿದ್ದಾರೆ. ಆದರೆ ಈಗ ಹಲವಾರು ಕೃಷಿಕರಿಗೆ ನೋಟಿಸ್ ನೀಡಿ ಮಂಜೂರಾತಿ ವಜಾ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆದಿದೆ ಎಂದು ಕಳಸ ಸಹಕಾರಿ ಸಂಘದಲ್ಲಿ ಈ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ಮಂಜಪ್ಪಯ್ಯ ತಿಳಿಸಿದರು.
40 ವರ್ಷಗಳ ಹಿಂದೆ ಸೆಕ್ಷನ್ 4 ರೂಪದಲ್ಲಿ ಮೀಸಲು ಅರಣ್ಯ ರಚಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿತ್ತು. ಈವರೆಗೂ ಮೀಸಲು ಅರಣ್ಯದ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವ ಬಡ ಜನರಿಗೆ ಸರ್ಕಾರವೇ ನಿವೇಶನ ಮಂಜೂರಾತಿ ನೀಡಿದೆ. ಮನೆ ಕಟ್ಟಿಕೊಳ್ಳಲು ಸಹಾಯಧನ ಕೂಡ ಕೊಟ್ಟಿದೆ. ಆದರೆ ಇದೀಗ ಸೆಕ್ಷನ್ 17 ಮೂಲಕ ಖಾಯಂ ಮೀಸಲು ಅರಣ್ಯ ಮಾಡುವ ಯೋಜನೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇದೇ 11ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಕಳಸ ಸಹಕಾರಿ ಬ್ಯಾಂಕ್ ಆವರಣದಲ್ಲಿ ಈ ಬಗ್ಗೆ ಪ್ರತಿಭಟನಾ ಸಭೆ ನಡೆಸಲಾಗುತ್ತದೆ. ಎಲ್ಲ ರೈತರು ಮತ್ತು ಕಳಸದ ಸಂಘಟನೆಗಳು ಈ ಸಭೆಯಲ್ಲಿ ಭಾಗವಹಿಸಿ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ರೂಪಿಸುವಂತೆ ಅವರು ಕೋರಿದರು. ವಿವಿಧ ಸಂಘಟನೆಗಳ ಶೇಷಗಿರಿ,ಸಂತೋಷ್ ಹಿನಾರಿ, ಭೋಜರಾಜ್, ಸುರೇಶ್ ಭಟ್, ಅನಿಲ್ ಡಿಸೋಜ, ನೂಜಿ ಸುರೇಶ್ ಮತ್ತಿತರರು ಇದ್ದರು.
