‘ನಿಮ್ಮ ಅಪ್ಪಾಜಿ ಇರಬೇಕಿತ್ತು..ತುಂಬಾ ಖುಷಿ ಪಡುತ್ತಾ ಇದ್ದರು…’
‘ ನಿಮ್ಮ ಅಮ್ಮ ಇದ್ದಿದ್ರೆ ಎಷ್ಟು ಸಡಗರ ಪಡುತ್ತಿದ್ದರು’
ಕಳಸದ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಜೊತೆ ಜೊತೆಗೆ
ನಮ್ಮ ಮನೆ ದೇವರಾದ ಕೆಳಂಗಡಿ ಪದ್ಮಾವತಿಯಮ್ಮ ಮತ್ತು ಪಾಶ್ರ್ವನಾಥ ಸ್ವಾಮಿಯ ನೂತನ ಶಿಲಾಮಯ ಬಸದಿಯಲ್ಲೂ ಮೊನ್ನೆ ಮುಗಿದ ಪಂಚಕಲ್ಯಾಣದ ಸಂದರ್ಭದಲ್ಲಿ ಪ್ರತಿ ದಿನವೂ ಹಲವಾರು ಹಿರಿಯರು ನನ್ನ ಕಿವಿಯಲ್ಲಿ ಉಸುರಿದ ಈ ಮಾತುಗಳು ನನ್ನ ಕಣ್ಣಲ್ಲಿ ಆಗಾಗ ನೀರು ತರಿಸಿತು.
ಐದು ದಿನಗಳ ವಿವಿಧ ಪೂಜೆ, ಆರಾಧನೆ, ಅಭಿಷೇಕಗಳ ನಂತರ ನಮ್ಮ ದೇವಸ್ಥಾನದ ಗರ್ಭಗುಡಿಯ ಮೇಲೆ ಶಿಖರ ಏರಿಸುವಾಗ ಅತ್ಯಂತ ರೋಮಾಂಚನಗೊಂಡೆನು. ಅಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂಬ ಹೆಮ್ಮೆ ಮೂಡಿದರೂ, ಇದು ಪಟ್ಟಣಶೆಟ್ಟರ ಮನೆತನದ ಪ್ರತಿನಿಧಿಯಾಗಿ ನನಗೆ ಸಿಕ್ಕ ಅವಕಾಶವೇ ಹೊರತು, ವೈಯಕ್ತಿಕವಾಗಿ ನನಗೆ ಯಾವ ಹೆಚ್ಚುಗಾರಿಕೆ ಇಲ್ಲ ಎಂಬ ವಿನೀತ ಭಾವದಿಂದ ಆ ಕೆಲಸ ಮಾಡಿದೆ.

ನಮ್ಮ ಮುತ್ತಜ್ಜ ಭೈರವನಕೋಟೆಯ ಸ್ವರ್ಗೀಯ ಸಾಹುಕಾರ್ ನೇಮಣ್ಣ ಶೆಟ್ಟರು 1924ರಲ್ಲಿ ಕಳಸದ ಕೆಳಂಗಡಿ ಪದ್ಮಾವತಿ ದೇವಸ್ಥಾನದ ಜೊತೆಗೆ ಭೈರವನಕೋಟೆ ಮತ್ತು ಫಲ್ಗುಣಿಯಲ್ಲೂ ದೇವಸ್ಥಾನ ಕಟ್ಟಿಸಿದವರು.ಅಲ್ಲಿ ಈಗಲೂ ಚಿನ್ನದ ಮುಖವಾಡ ಕೂಡ ಇದೆ.ಕಳಸದಲ್ಲಿ ಹೆಣ್ಣು ಕೊಟ್ಟ ಮನೆಗೆ ದೇವಸ್ಥಾನ ಕೊಡುಗೆ ಕೊಟ್ಟ ಅವರು ಕೊಡುಗೈ ದಾನಿ ಆಗಿದ್ದವರು.
ಅವರು ಕಟ್ಟಿಸಿದ 3 ದೇವಸ್ಥಾನಗಳಲ್ಲಿ ಇರುವ ನಿಂತ ಭಂಗಿಯ ಭೈರವ ಪದ್ಮಾವತಿಯಮ್ಮ ಭಕ್ತರ ಪ್ರಕಾರ ಅತ್ಯಂತ ಶಕ್ತಿಶಾಲಿ ದೇವಿ. ನಮ್ಮ ದೇವಸ್ಥಾನದ ಭೈರವ ಪದ್ಮಾವತಿ ದೇವಿಯ ಒಂದು ನಾಗಹೆಡೆಯು ಬಹಳ ಹಿಂದೆಯೇ ಮುರಿದಿತ್ತು. ಅದನ್ನು ಕಾಳಿಕೆರೆ ಅಣ್ಣಯ್ಯ 10 ವರ್ಷದ ಹಿಂದೆ ಸರಿಪಡಿಸಿ ತಂದು ಕೊಟ್ಟಾಗ ಆ ವಿಗ್ರಹವನ್ನು ಕೈಯಲ್ಲಿ ಹಿಡಿದುಕೊಂಡು ಅಪ್ಪಾಜಿ ತುಂಬಾ ಖುಷಿ ಪಟ್ಟಿದ್ದರು.
ಇಂದು ಇಡೀ ದೇವಸ್ಥಾನವನ್ನೇ ಹೊಸದಾಗಿ ಶಿಲಾಮಯವಾಗಿ ನಿರ್ಮಾಣ ಮಾಡಿ, ಪಾಶ್ರ್ವನಾಥ ಸ್ವಾಮಿ ಮತ್ತು ಪದ್ಮಾವತಿ ದೇವಿಯ ಹೊಸ ಶಿಲಾ ವಿಗ್ರಹ ಕೆತ್ತಿಸಿ 5 ದಿನಗಳ ಕಾಲ ಅತ್ಯಂತ ವಿಧಿವತ್ತಾಗಿ ಪಂಚಕಲ್ಯಾಣ ನಡೆದಿದ್ದನ್ನು ಕಂಡಿದ್ದರೆ ಅಪ್ಪಾಜಿ ಮತ್ತು ಅಮ್ಮನಿಗೆ ಎಷ್ಟು ಖುಷಿ ಆಗುತ್ತಿತ್ತೋ ಎಂದು ನಮಗೆಲ್ಲ ಅನ್ನಿಸಿತು.
1984ರಲ್ಲಿ ನಮ್ಮ ದೇವಸ್ಥಾನದ ಬಗ್ಗೆ ವಿವಾದ ಮೂಡಿದಾಗ ಅಪ್ಪಾಜಿ ಛಲ ಬಿಡದೆ ಒಂದು ವಾರದಲ್ಲೇ ಮಣ್ಣಿನಪಾಲ್ ಮಾವ (ಹೊರನಾಡಿನ ಪಟೇಲರಾಗಿದ್ದ ವರ್ಧಮಾನ್ ಶೆಟ್ಟಿ) ಅವರಿಂದ ನಿತ್ಯಪೂಜೆ ಕಲಿತವರು. ಆನಂತರದ 39 ವರ್ಷ ಅಪ್ಪಾಜಿ ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಬದ್ಧತೆಯಿಂದ ಪದ್ಮಾವತಿ, ಪಾಶ್ರ್ವನಾಥರ ಆರಾಧನೆ ಮಾಡಿದವರು.ಪೂಜೆಯೇ ಜೀವನದ ಪರಮ ಗುರಿ ಎಂಬಂತೆ ವರ್ತಿಸುತ್ತಿದ್ದರು.ನಾನು ಕಂಡಂತೆ ದೇವರಪೂಜೆ ಮತ್ತು ಕೃಷಿ ಬಿಟ್ಟರೆ ಅವರ ಬದುಕಿನಲ್ಲಿ ಇನ್ನೇನೂ ಆಸೆ, ಗುರಿ ಇರಲಿಲ್ಲ.
ನಾನು, ಅಕ್ಕ ರೇಖಾ ಪ್ರತಿದಿನ ಶಾಲೆಗೆ ಹೋಗುವ ಮೊದಲು ದೇವಸ್ಥಾನಕ್ಕೆ ಬರಲೇ ಬೇಕು ಎಂಬ ಕಟ್ಟಪ್ಪಣೆ ಇತ್ತು. ದೇವಸ್ಥಾನಕ್ಕೆ ಹೋಗಿ ಬಂದರೆ ಮಾತ್ರ ಬೆಳಗಿನ ತಿಂಡಿ ಎಂಬ ನಿಯಮವನ್ನು ಅಮ್ಮ ಕೂಡ ಮಾಡಿದ್ದರು. 10ನೇ ತರಗತಿವರೆಗೂ ನಾವು ಇದನ್ನು ಪಾಲಿಸಿದೆವು. ಆನಂತರ ಕಾಲೇಜು ಮೆಟ್ಟಿಲು ಹತ್ತಿ ಬೇರೆ ಊರಿಗೆ ಹೋದ ಮೇಲೆ ನನ್ನ ಆಸ್ತಿಕತೆ ಸಡಿಲವಾಯಿತು.
ಕಾರ್ಕಳ, ಬೆಂಗಳೂರಿನ ಕಾಲೇಜು ಜೀವನದ ದಾಂಗುಡಿ, ವಿಚಾರವಂತರ ಸಹವಾಸದಿಂದ ನಾಸ್ತಿಕತೆಯ ಕಡೆಗೆ ಹೆಚ್ಚು ಮನಸ್ಸು ವಾಲಿತ್ತು. ಆದರೆ ನಮ್ಮ ಬಾಲ್ಯದಲ್ಲಿ ಅಪ್ಪಾಜಿ ಮಾಡುತ್ತಿದ್ದ ಪೂಜೆಯ ಮಂತ್ರಗಳ ಸ್ಪಷ್ಟ ಉಚ್ಚಾರ, ಅಂಗಿಕ ಚಲನೆಗಳು, ಅವರು ಅಮ್ಮ, ಅಜ್ಜಿ ಜೊತೆಗೆ ಮುನಿಗಳು, ಕ್ಷುಲ್ಲಕರು, ಬ್ರಹ್ಮಚಾರಿಗಳು, ಮಾತಾಜಿಯರು ಮತ್ತು ಭಟ್ಟಾರಕರಿಗೆ ಆಹಾರದಾನ ಮಾಡುತ್ತಿದ್ದ ನೆನಪು ಈಗಲೂ ಹಸಿರು.

ಅದರಲ್ಲೂ ಅತ್ಯಂತ ಕಠಿಣ ನಿಯಮವಾದ ಕೇಶಲೋಚನ ಮಾಡಿಕೊಳ್ಳುವ ಮುನಿಗಳ ಬಗ್ಗೆ ನನಗೆ ಶ್ರವಣಬೆಳಗೊಳದಲ್ಲಿ ಕಳೆದ ಬಾಲ್ಯದಿಂದಲೂ ವಿಶೇಷ ಗೌರವ, ಭಕ್ತಿ. ಆದ್ದರಿಂದ ನಾಸ್ತಿಕ ಪ್ರಜ್ಞೆಯ ನಡುವೆಯೂ ಪ್ರತ್ಯಕ್ಷ ದೇವರನ್ನು ಅವರಲ್ಲಿ ಕಾಣುವ ಪ್ರಯತ್ನವನ್ನು ಸದಾ ಮಾಡುತ್ತಿದ್ದೇನೆ.
ಇನ್ನು, ಕಳೆದ ವಾರದಿಂದ ನಡೆದ ಪಂಚಕಲ್ಯಾಣದ ಬಗ್ಗೆ ಹೇಳುವುದಾದರೆ, ಚಂದ್ರನಾಥ ಬಸದಿಯ ಅದ್ಭುತ ಶಿಲ್ಪಕಲೆಯ ಜೊತೆಗೆ ನಮ್ಮ ಪುಟ್ಟ ದೇವಸ್ಥಾನದ ರೂಪ ಕೂಡ ಎಲ್ಲರ ಮೆಚ್ಚುಗೆ ಪಡೆಯಿತು.ಗಟ್ಟಿಮುಟ್ಟಾಗಿ ಇದ್ದ ನಮ್ಮ ದೇವಸ್ಥಾನವನ್ನು ಹಿಂದೆ ಇದ್ದ ಸ್ಥಳದಿಂದ ತೆಗೆದು ಬೇರೆ ಕಡೆ ನಿರ್ಮಾಣ ಮಾಡುವಲ್ಲಿ ಅಪ್ಪಾಜಿಗೆ ಸಮ್ಮತಿ ಇರಲಿಲ್ಲ. ಅವರು ಕೂಡ ನನ್ನಂತೆ ವಾಸ್ತು ಬಗ್ಗೆ ನಂಬಿಕೆ ಹೊಂದಿರಲಿಲ್ಲ.
ಆದರೆ ಜೀಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಸಿ.ಧರಣೇಂದ್ರಯ್ಯ ಅವರ ಸತತ ಮನ ಒಲಿಕೆ ನಂತರ ಅಪ್ಪಾಜಿ ದೇವಸ್ಥಾನ ಬಿಚ್ಚಲು ಒಪ್ಪಿದ್ದರು.ಹೊಸ ದೇವಸ್ಥಾನದ ಶಿಲಾನ್ಯಾಸದ ನಂತರ ಅಪ್ಪಾಜಿ ಸ್ವರ್ಗಸ್ಥರಾದರು. ದೇವಸ್ಥಾನದ ಕೆಲಸ ಮುಗಿಸಿಕೊಡುವವರೆಗೂ ನನ್ನ ಜವಾಬ್ದಾರಿ ಎಂದು ಧರಣೇಂದ್ರಯ್ಯ ಅಂದು ಅಪ್ಪಾಜಿಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ. ಅವರಿಗೆ ಕೆಳಂಗಡಿ ಮತ್ತು ಭೈರವನಕೋಟೆ ಕುಟುಂಬಸ್ಥರ ಪರವಾಗಿ ಅನಂತ ವಂದನೆಗಳು.


ಇನ್ನು ಪಂಚಕಲ್ಯಾಣದ ಸಂದರ್ಭದಲ್ಲಿ ಪಟ್ಟಣಶೆಟ್ಟರ ಮನೆತನಕ್ಕೆ ಸೇರುವ ಪದ್ಮಾವತಿ, ಪಾಶ್ರ್ವನಾಥ ಸ್ವಾಮಿ ಬಸದಿಯ ಎಲ್ಲ ಐದು ಕಲ್ಯಾಣದ ವಿಧಿಗಳನ್ನು ಸಂಪ್ರದಾಯಕ್ಕೆ ತಕ್ಕಂತೆ ನೆರವೇರಿಸಿದ ಮುನಿವರ್ಯರು, ಭಟ್ಟಾರಕರು, ಪ್ರತಿಷ್ಟಾಪನಾ ಪುರೋಹಿತರ ತಂಡಕ್ಕೆ ನಮ್ಮ ಕುಟುಂಬ ಅಭಾರಿಯಾಗಿದೆ ಎಂದು ನಮ್ರತೆಯಿಂದ ತಿಳಿಸಲು ಬಯಸುತ್ತೇನೆ.ಎಲ್ಲ ಸಹಕಾರ ನೀಡಿದ ಜೀರ್ಣೋದ್ಧಾರ ಸಮಿತಿ ಮತ್ತು ಸರ್ವೋದಯ ತೀರ್ಥ ಸಮಿತಿಯ ಪದಾಧಿಕಾರಿಗಳಿಗೂ ವಂದನೆಗಳು.
‘ಹೆಚ್ಚು ನಾಸ್ತಿಕ, ಅಲ್ಪ ಆಸ್ತಿಕ’ ಹೀಗೆ ಎಡಬಿಡಂಗಿ ಚಿಂತನೆಯ ನನಗೆ ಅತಿಯಾದ ಆಸ್ತಿಕತೆ ಬಗ್ಗೆ ವಿರೋಧವೇನೂ ಇಲ್ಲ. ಆದರೆ, ಢಾಂಬಿಕ ಭಕ್ತರನು ಕಂಡಾಗ ‘ಬರುಸಠಗನ ಭಕ್ತಿ ದಿಟ ಎಂದು ನಚ್ಚಲು ಬೇಡ, ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತು ಕಾಣಾ ರಾಮನಾಥ’ ಎಂಬ ವಚನ ಮತ್ತೆ ಮತ್ತೆ ನೆನಪಾಗುತ್ತದೆ ಅಷ್ಟೇ.
ನಾನು ಪೂಜೆ ಪುನಸ್ಕಾರದಲ್ಲಿ ಆಸಕ್ತಿ ಇಲ್ಲದ ವ್ಯಕ್ತಿ ಎಂಬ ಕಾರಣಕ್ಕೆ ನನ್ನ ಬಗ್ಗೆ ಅಪ್ಪಾಜಿಗೆ ಬೇಸರ, ನಕಾರಾತ್ಮಕ ಭಾವನೆ ಇತ್ತು. ಅವರ ಗೆಳಯ ಜಯಚಂದ್ರ ಅವರ ಬಳಿ ಹಲವಾರು ಬಾರಿ ಈ ಬಗ್ಗೆ ಹೇಳಿಕೊಂಡಿದ್ದರು.

ಪಂಚಕಲ್ಯಾಣದ ಈ ದಿನಗಳಲ್ಲಿ ನಾನು ಧಾರ್ಮಿಕ ವಿಧಿಯಂತೆ ಮುಂಚೂಣಿಯಲ್ಲಿ ನಿಲ್ಲಬೇಕಾಯಿತು. ಇದರಲ್ಲಿ ಪಟ್ಟಣ ಶೆಟ್ಟರು ಎಂಬ ಯಾವುದೇ ಗರ್ವ, ತೋರಿಕೆಯ ಬಯಕೆ ಇರಲಿಲ್ಲ. ಭರವಸೆಯ ಯುವ ಭಟ್ಟಾರಕರೆಲ್ಲರೂ ತಮ್ಮ ಮಠಕ್ಕೆ ಬಂದು ಭೇಟಿ ಆಗುವಂತೆ ನೀಡಿರುವ ಸೂಚನೆಯಿಂದ ಬಹಳ ಖುಷಿ ಆಗಿದೆ.
ನಮ್ಮ ದೇವಸ್ಥಾನದ ಬಗ್ಗೆ ಬಹಳಷ್ಟು ಕಾಳಜಿ ತೋರಿದ ಹೊರನಾಡಿನ ಹೆಚ್.ಸಿ.ಅಣ್ಣಯ್ಯ, ಅಣ್ಣನಂತೆ ಸದಾ ನೆರಳಾಗಿ ಸಲಹೆ ಸೂಚನೆ ಕೊಡುತ್ತಿರುವ ಮಣ್ಣಿನಪಾಲು ಪುಟ್ಟಣ್ಣ ಶೆಟ್ಟಿ ಹಾಗೂ ಮಕ್ಕಿತಲೆ ಬ್ರಹ್ಮಣ್ಣ ಪ್ರೀತಿಗೆ ಎಲ್ಲೆಯೇ ಇಲ್ಲ.ಪೂಜೆಯ ಸಂದರ್ಭದಲ್ಲಿ ಹಗಲಿರುಳೂ ಶ್ರಮಿಸಿ ಸಹಕಾರ ನೀಡಿದ ಕಳಸ ಸೀಮೆಯ ಯುವ ಜೈನರ ಪಡೆ, ಬೆಳಗಿನಿಂದ ನಡುರಾತ್ರಿವರೆಗೂ ಛಲ ಬಿಡದೆ ಕೆಲಸ ಮಾಡಿದ ಅನುಭವಿ ಶ್ರಾವಕ ಶ್ರಾವಕಿಯರಿಗೆ ಅನಂತ ನಮನ ಅರ್ಪಿಸುತ್ತೇನೆ.
ವಿಶೇಷವಾಗಿ ಪಂಚಕಲ್ಯಾಣದಲ್ಲಿ ಕಳಸದ ಎಲ್ಲ ಜಾತಿ ಧರ್ಮಗಳ ಜನರು ಬಸದಿ ಪರಿಸರದಲ್ಲಿ ತಮ್ಮ ಹಾಜರಿ ಹಾಕಿದ್ದಾರೆ. ಶಾಸನಗಳಲ್ಲಿ ಇರುವಂತೆ ಭೈರವರಸರು ಸರ್ವ ಧರ್ಮ ಸಮನ್ವಯತೆ ಕಾಯ್ದುಕೊಂಡು ರಾಜ್ಯ ಆಳಿದಂತೆ ಕಳಸ ಎಂದಿಗೂ ಸರ್ವ ಜನಾಂಗದ ಶಾಂತಿಯ ತೋಟ ಆಗಲಿ ಎಂಬ ಆಶಯ ನಮ್ಮೆಲ್ಲರದೂ ಹೌದು.
ಧಾವಂತದ ಬದುಕು, ವಿರಾಮ ಇಲ್ಲದ ದುಡಿಮೆ ನಡುವೆ ಬಸದಿ ಪಂಚಕಲ್ಯಾಣದ ನೆಪದಲ್ಲಿ ನಮ್ಮ ಅಮ್ಮ, ಅಪ್ಪಾಜಿ ಮತ್ತು ಅಜ್ಜಿಯ ನೆನಪು ಹಸಿರಾಯಿತು.ನಮ್ಮ ಹಿರಿಯರು ಕಲಿಸಿದ ದಾನ-ಧರ್ಮದ ನೆಲೆಯಲ್ಲಿ ಬದುಕು ಸಾಗಬೇಕು ಎಂಬ ಗೆರೆ ಮೀರದೆ ಬಾಳ್ವೆ ಸಾಗಬೇಕಿದೆ.
ಗೆಳೆಯನೊಬ್ಬ ನಿನ್ನೆ ನಡುರಾತ್ರಿ ಕಳಿಸಿದ ಸಂದೇಶ ಹೀಗಿತ್ತು,
‘ನೀನು ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳನ್ನು ದಾಟುವ ಹಾದಿಯ ಅನುಭವಗಳು ನನ್ನಲ್ಲಿ ನಿನ್ನ ಬಗ್ಗೆ ಹೆಮ್ಮೆ ಮತ್ತು ಹೊಟ್ಟೆಕಿಚ್ಚು ತರುತ್ತಿದೆ…’
ನನ್ನ ಆತ್ಮರತಿಯ ಈ ಬರಹದ ಬಗ್ಗೆ ಕ್ಷಮೆ ಇರಲಿ, ಅಜ್ಜಿ, ಅಪ್ಪಾಜಿ, ಅಮ್ಮನ ಆತ್ಮಕ್ಕೆ ಈಗ ಶಾಂತಿ ಸಿಕ್ಕಿರಬಹುದು ಎಂಬ ಖುಷಿಯೊಂದೇ ನನಗೆ ಸಾಕು.
ರವಿ ಕೆಳಂಗಡಿ, ಕಳಸ
