ಅಡಿಕೆ ಫಸಲು ಅರ್ಧಕ್ಕಿಂತ ಕಡಿಮೆ: ಪರಿಹಾರಕ್ಕಾಗಿ ಆಗ್ರಹ

ಕಳಸ:ಮೊದಲ ಸುತ್ತಿನ ಅಡಿಕೆ ಕೊಯ್ಲು ಮುಗಿಯುತ್ತಿದ್ದು ತಾಲ್ಲೂಕಿನಾದ್ಯಂತ ಅಡಿಕೆ ಫಸಲು ಶೇ.50ರಿಂದ 60ರಷ್ಟು ಕುಸಿದಿರುವುದು ಕಂಡು ಬಂದಿದೆ. ಕಳೆದ ಮೂರು ವರ್ಷಗಳ ಎಲೆಚುಕ್ಕಿ ರೋಗದ ಬಾಧೆ ಮತ್ತು ಹವಾಮಾನದ ಬದಲಾವಣೆಯಿಂದ ಈ ವರ್ಷ ಎಲ್ಲೆಡೆ ಅಡಿಕೆ ಫಸಲು ಕಡಿಮೆ ಆಗಿದೆ ಎಂಬ ಅಂದಾಜು ಇದೆ. ಈ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ಕೊಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಜೊತೆಗೆ ಅಡಿಕೆ ತೋಟಗಳಲ್ಲಿ ಕಳೆದ ಮೂರು ವರ್ಷಗಳ ಸತತ ಮಳೆಯ ಕಾರಣಕ್ಕೆ ತೇವಾಂಶ ಹೆಚ್ಚಿ ಹೂಗಳು ತೆಳ್ಳನೆ ಬಂದಿರಬಹುದು ಎಂಬ ಲೆಕ್ಕಚಾರವೂ ಅನುಭವಿ ಬೆಳೆಗಾರರ ವಲಯದಲ್ಲಿದೆ.ಈ ವರ್ಷದ ಹಗುರವಾದ ಕೊನೆಗಳ ಬಗ್ಗೆ ಎಲ್ಲೆಡೆ ಪ್ರಸ್ತಾಪ, ನಿರಾಶೆ ವ್ಯಕ್ತವಾಗುತ್ತಿದೆ.
ಕಳಸದ ಹಸಿ ಅಡಿಕೆ ವ್ಯಾಪಾರಿ ಸುನಿಲ್ ಸಂಪಾನೆ ಪ್ರಕಾರ ‘ಈ ವರ್ಷ ಅರ್ಧದಷ್ಟು ಅಡಿಕೆ ಕೂಡ ಫಸಲು ಇಲ್ಲ’ ಎನ್ನುತ್ತಾರೆ. ಚಿತ್ರದುರ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿಗೆ ಕಳಸ ತಾಲ್ಲೂಕಿನಿಂದ ಪ್ರತಿ ವರ್ಷವೂ ಸಾವಿರಾರು ಕ್ವಿಂಟಾಲ್ ಹಸಿ ಅಡಿಕೆ ರವಾನೆ ಆಗುತ್ತೆ. ಮೂರು ತಿಂಗಳ ಕಾಲ ಈ ಸಾಗಣೆ ವ್ಯವಹಾರ ನಂಬಿಕೊಂಡು ಅನೇಕ ಸರಕು ಸಾಗಣೆ ವಾಹನಗಳು ಕಳಸದಲ್ಲಿ ಇವೆ. ಈ ಬಾರಿ ಆ ವಾಹನಗಳಿಗೂ ನಿರೀಕ್ಷಿತ ಬಾಡಿಗೆ ಸಿಗದೆ ನಿರಾಶೆಯೇ ಆಗಿದೆ.
‘ಕಳೆದ ವರ್ಷಗಳಲ್ಲಿ ಮೂರು ತಿಂಗಳೂ ಚನ್ನಗಿರಿ ಹಸಿ ಅಡಿಕೆ ಟ್ರಿಪ್ ಹೊಡೀತಾ ಇದ್ದೆವು. ಈ ವರ್ಷ ಒಂದೂವರೆ ತಿಂಗಳು ಕೂಡ ಬಾಡಿಗೆ ಖಾತ್ರಿ ಇಲ್ಲ’ ಎಂದು ಸರಕು ಸಾಗಣೆ ವಾಹನಗಳ ಮಾಲೀಕರು ಹೇಳುತ್ತಾರೆ.
ಬೆಳೆಗಾರರ ಪ್ರಕಾರ ಕಳೆದ ಬೇಸಿಗೆಯಲ್ಲೇ ಮಡಿ ಹಿಂಗಾರ ಆಗಿತ್ತು. ಮಾರ್ಚ್ ತಿಂಗಳಲ್ಲಿ ಹರಳೂ ಉದುರಿತ್ತು. ಏಪ್ರಿಲ್ನಿಂದ ಮಳೆ ಆರಂಭವಾದರೂ ಸತತ ಮಳೆ ಕಾರಣಕ್ಕೂ ಫಸಲಿಗೆ ಹಾನಿ ಆಯಿತು. ಕೆಲವು ತೋಟಗಳಲ್ಲಿ ಮಳೆಯಲ್ಲಿ ಕೊಳೆ ರೋಗವೂ ಕಂಡು ಬಂದಿತ್ತು. ಆದರೂ ಇಷ್ಟು ಪ್ರಮಾಣದಲ್ಲಿ ಫಸಲು ಕಡಿಮೆ ಆಗಲು ಕಾರಣ ಏನು ಎಂಬ ಬಗ್ಗೆ ಬೆಳೆಗಾರರಲ್ಲಿ ತೀವ್ರ ಗೊಂದಲ ಇದೆ.
ಎಳನೀರು, ಸಂಸೆ ಪ್ರದೇಶದಲ್ಲಿ ಎಲೆ ಚುಕ್ಕಿ ರೋಗ ತೀವ್ರವಾಗಿ ಬಾಧಿಸುತ್ತಿದೆ.ಅಲ್ಲಿ ಶೇ.10-15 ಮಾತ್ರ ಫಸಲು ಸಿಗುತ್ತಿದೆ. ಎಳನೀರಿನ ಅಡಿಕೆ ಬೆಳೆಗಾರ ಮೃತ್ಯುಂಜಯ ನಾಯಕ್ ‘ 30 ಕ್ವಿಂಟಾಲ್ ಅಡಿಕೆ ಬೆಳೆಯುತ್ತಿದ್ದ ನಮ್ಮ ತೋಟದಲ್ಲಿ ಕೇವಲ 3 ಕ್ವಿಂಟಾಲ್ ಮಾತ್ರ ಸಿಗುತ್ತಿದೆ’ ಎಂದು ಬೇಸರ ಪಡುವಾಗ ಎಲೆಚುಕ್ಕಿ ರೋಗದ ತೀವ್ರತೆ ಅರಿವಾಗುತ್ತದೆ.
ಈಗಾಗಲೇ ಅಡಿಕೆ ಸುಲಿಯಲು, ಔಷಧಿ ಹೊಡೆಯಲು ಒಳ್ಳೆಯ ಮೆಷೀನ್ ಬಂದಿದೆ. ಆದರೆ ಇನ್ನೊಂದು ಹತ್ತು ವರ್ಷದಲ್ಲಿ ಅಡಿಕೆ ತೋಟಗಳ ಸ್ಥಿತಿ ಏನಾಗಬಹುದು ಎಂದು ಆತಂಕ ಬೆಳೆಗಾರರಲ್ಲಿ ಇದೆ.
ಅಡಿಕೆ ಫಸಲು ಆತಂಕಕಾರಿ ಪ್ರಮಾದಲ್ಲಿ ಕಡಿಮೆ ಆಗಿರುವ ಬಗ್ಗೆ ವಿಜ್ಞಾನಿಗಳು ವರದಿ ನೀಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಜನಪ್ರತಿನಿಧಿಗಳು ಕೂಡ ಅಡಿಕೆ ಫಸಲು ಆಗಿರುವ ಬೆಳೆಗಾರರಿಗೆ ವೈಜ್ಞಾನಿಕ ಪರಿಹಾರ ಕೊಡಿಸಬೇಕು ಎಂಬ ಒತ್ತಾಯವೂ ಬೆಳೆಗಾರರ ವಲಯದಲ್ಲಿ ಕೇಳಿ ಬರುತ್ತಿದೆ.
