ಕಳಸ:ತಾಲ್ಲೂಕಿನಲ್ಲಿ ವಿವಿಧೆಡೆ ಒಟ್ಟು 35 ಕೋಟಿ ರೂಪಾಯಿ ವೆಚ್ಚದಲ್ಲಿ 5 ಪ್ರಮುಖ ಸೇತುವೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.
ಹಲವಾರು ವರ್ಷಗಳಿಂದ ನೆಲ್ಲಿಬೀಡು ಗ್ರಾಮಸ್ಥರ ಬೇಡಿಕೆಯಾಗಿದ್ದ ನೆಲ್ಲಿಬೀಡು-ಕಟ್ಟಿನಮನೆ ಸೇತುವೆಗೆ 17.5 ಕೋಟಿ ರೂಪಾಯಿ ಮಂಜೂರು ಆಗಿದೆ. ಇದರಿಂದ ಆ ಭಾಗದ ನೂರಾರು ಗ್ರಾಮಸ್ಥರಿಗೆ ಅನುಕೂಲ ಆಗಲಿದೆ ಎಂದು ಅವರು ತಿಳಿಸಿದರು.
ಬಾಳೆಹೊಳೆ ಸಮೀಪದ ಕಗ್ಗನಳ್ಳ-ಬಿಳುಗೂರು ಸಂಪರ್ಕಕ್ಕೆ 9 ಕೋಟಿ ವೆಚ್ಚದ ತೂಗುಸೇತುವೆ ನಿರ್ಮಾಣಕ್ಕೂ ಅನುಮೋದನೆ ಸಿಕ್ಕಿದೆ. ಬಾಳೆಹೊಳೆ-ಬಾಳೆಹೊನ್ನೂರು ರಸ್ತೆಯ ಕಗ್ಗನಳ್ಳದಲ್ಲಿ 3.5 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಮತ್ತೊಂದು ಸೇತುವೆ ಮತ್ತು ನೆಲ್ಲಿಬೀಡಿನಲ್ಲಿ ಭದ್ರಾ ನದಿ ಉಕ್ಕುತ್ತಿದ್ದ ಪ್ರದೇಶದಲ್ಲಿ 2.5 ಕೋಟಿ ವೆಚ್ಚದಲ್ಲಿ ಇನ್ನೊಂದು ಸೇತುವೆ ನಿರ್ಮಾಣ ಆಗಲಿದೆ ಎಂದು ಅವರು ತಿಳಿಸಿದರು.
ಕಳಸ ತಾಲ್ಲೂಕು ಕೇಂದ್ರಕ್ಕಾಗಿ 5 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣ ಸದ್ಯದಲ್ಲೇ ಆರಂಭವಾಗಲಿದೆ.ಈಗಿನ ತಾಲ್ಲೂಕು ಕಚೇರಿಯನ್ನು ಅರಳಿಕಟ್ಟೆ ಪಕ್ಕದ ಸರ್ಕಾರಿ ಶಾಲೆಗೆ ಸ್ಥಾಳಂತರಿಸಲಾಗುತ್ತದೆ. ಕಳಸ ತಾಲ್ಲೂಕಿಗೆ ದೊಡ್ಡ ಮಟ್ಟದ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹಕಾರದಿಂದ ತರಲಾಗುತ್ತಿದೆ ಎಂದರು.
ಮಹಾಲ್ಗೋಡು ಗ್ರಾಮದಲ್ಲಿ 3 ಕೋಟಿ ವೆಚ್ಚದ ಸೇತುವೆ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಕಳಸ ತಾಲ್ಲೂಕಿನ ಬಹುತೇಕ ಸೇತುವೆಗಳ ಬೇಡಿಕೆ ಈಡೇರಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
