ಕಳಸ:ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ಗಿರಿಜನ ಕಾಲೋನಿಗಳ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರವು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಪಂಗಡಗಳ ಅರೆ ಅಲೆಮಾರಿ ಸಮುದಾಯಗಳ ಕಾಲೋನಿಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು 50 ಲಕ್ಷ ರೂಪಾಯಿ ಬಿಡುಗಡೆ ಮಾಡಿತ್ತು. ಶಾಸಕಿ ನಯನಾ ಮೋಟಮ್ಮ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು ಹೊರನಾಡು ಗ್ರಾಮದ ಮುಂಡುಗದಮನೆ, ಕೌರಿ ಹಕ್ಲು, ಹುಲ್ಗಾರ್ಗದ್ದೆ, ಹುಳಿಬಿಳಲು, ಗೀತೋಟ, ಬೊಮ್ಮನಕೊಂಡ, ಸಿಲ್ವರ್ಕಟ್ಟೆ, ಸಣ್ಣಕುಂಬ್ರಿ, ನೇರಳೆಕೊಂಡ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ತಲಾ 5 ಲಕ್ಷ ಹಂಚಿಕೆ ಮಾಡುವಂತೆ ಕೋರಿದ್ದಾರೆ.
ಈ ಕಾಮಗಾರಿಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಮೂಲಕ ಅನುಷ್ಟಾನ ಮಾಡುವಂತೆಯೂ ಶಾಸಕಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಹೊರನಾಡು ಗ್ರಾಮದ ಅಭಿವೃದ್ಧಿಗೆ ಇನ್ನೂ 2 ಕೋಟಿ ರೂಪಾಯಿ ಅನುದಾನ ಕೋರಲಾಗಿದೆ. ಸದ್ಯದಲ್ಲೇ ಬಿಡುಗಡೆ ಆಗಲಿದೆ ಎಂದು ಕಾಂಗ್ರೆಸ್ ಮುಖಂಡ ರಫೀಕ್ ತಿಳಿಸಿದ್ದಾರೆ.
