ಕಳಸ:ಇಲ್ಲಿನ ಕಳಸೇಶ್ವರ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾಗಿ ಎಡದಾಳು ದಿನೇಶ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಸಮಿತಿಯ ನಿರ್ದೇಶಕರಾಗಿ ರಂಗನಾಥ್, ರವೀಂದ್ರ ಶೆಟ್ಟಿ,ಸುಧೀರ್, ಸುಮನಾ ಜಯರಾಜ್, ಪೂರ್ಣಿಮಾ ಅಶೋಕ್, ರಿಜ್ವಾನ್, ಶರಾವತಿ ರವಿರಾಜ್, ಸರಸ್ವತಿ ಜಗನ್ನಾಥ್, ಭಾರತಿ ಕೂಡ ಅವಿರೋಧವಾಗಿ ಆಯ್ಕೆ ಆದರು.
ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಒಂದು ನಿರ್ದೇಶಕ ಸ್ಥಾನವನ್ನು ಚುನಾವಣೆಯಲ್ಲಿ ಮೋಹನ್ ಗೆದ್ದುಕೊಂಡರು. ಅವರು ತಮ್ಮ ಪ್ರತಿಸ್ಪರ್ಧಿ ಮಂಜುನಾಥ್ ಅವರನ್ನು 214 ಮತಗಳಿಂದ ಸೋಲಿಸಿದರು.ಮೋಹನ್ ಅವರಿಗೆ 552 ಮತಗಳು, ಮಂಜುನಾಥ್ ಅವರಿಗೆ 338 ಮತಗಳು ಬಿದ್ದರೆ ಸೋಮಯ್ಯ ಅವರಿಗೆ 95 ಮತಗಳು ಮಾತ್ರ ದಕ್ಕಿದವು.
ಹೊಸ ಸಮಿತಿಯ ಪದಗ್ರಹಣ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಕಳಸೇಶ್ವರ ಗ್ರಾಮ ಅರಣ್ಯ ಸಮಿತಿಯು ಕಳೆದ 24 ವರ್ಷಗಳಿಂದ ಅಧ್ಯಕ್ಷ ರುದ್ರಯ್ಯ ಆಚಾರ್ ನೇತೃತ್ವದಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ಸ್ತುತ್ಯರ್ಹ ಕೆಲಸ ಮಾಡಿದೆ. ಮೂಡಿಗೆರೆ ಆಸುಪಾಸಿನಲ್ಲಿ ಗ್ರಾಮ ಅರಣ್ಯ ಸಮಿತಿಯೇ ಬೇಡ ಎಂದವರು ಈಗ ಲಕ್ಷಗಟ್ಟಲೆ ಹಣ ಸಮುದಾಯಕ್ಕೆ ಬರುವುದನ್ನು ಕಳೆದುಕೊಂಡಿದ್ದಾರೆ ಎಂದರು.
ವಲಯ ಅರಣ್ಯಾಧಿಕಾರಿ ನಿಶ್ಚಿತ್ ಮಾತನಾಡಿ, ಕಳಸೇಶ್ವರ ಗ್ರಾಮ ಅರಣ್ಯ ಸಮಿತಿಯು ಉತ್ತಮ ಕಾರ್ಯನಿರ್ವಹಣೆ ತೋರುತ್ತಿದ್ದು ಹೊಸ ಸದಸ್ಯರು ಸಮಿತಿಯ ನಿಬಂಧನೆಗಳನ್ನು ಅರಿತು ಕೆಲಸ ಮಾಡಬೇಕು ಎಂದರು. ಸಮಿತಿಯ ಸದಸ್ಯ ಕಾರ್ಯದರ್ಶಿ ಹರೀಶ್ ಮಾತನಾಡಿ, ಗ್ರಾಮ ಅರಣ್ಯ ಸಮಿತಿಯಲ್ಲಿ ಕಳೆದ 5 ವರ್ಷಗಳಲ್ಲಿ 60 ಲಕ್ಷ ರೂಪಾಯಿಗೂ ಹೆಚ್ಚು ಹಣ ಉಳಿಸಲಾಗಿದೆ. ಅದನ್ನು ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದರು.
ಸನ್ಮಾನ ಸ್ವೀಕರಿಸಿದ ರುದ್ರಯ್ಯ ಆಚಾರ್, ಕಳೆದ 24 ವರ್ಷಗಳಿಂದ ಅರಣ್ಯ ಇಲಾಖೆ ಸಹಕಾರದಿಂದಾಗಿ ಸಮಾಜಮುಖಿಯಾಗಿ ಬಹಳಷ್ಟು ಕೆಲಸ ಮಾಡಿದ ತೃಪ್ತಿ ಇದೆ.ಸಮಿತಿಯು ಕಳಸ ಕೆಪಿಎಸ್ ಶಾಲೆಗೆ ಡೆಸ್ಕ್ ಕೊಟ್ಟಿರುವುದು, ಬಲಿಗೆಗೆ ಶಾಲಾ ಬಸ್ ಸೇವೆ ಒದಗಿಸುತ್ತಿರುವುದು ಸದಾ ನೆನಪಿನಲ್ಲಿ ಇರುತ್ತದೆ ಎಂದರು,
ನಿರ್ಗಮಿತ ನಿರ್ದೇಶಕರಾದ ಗಣೇಶ್ ಭಟ್, ವಿಜಯಾ, ಬಾಲಕೃಷ್ಣ, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ನಾಗರಾಜ್, ಚುನಾವಣಾಧಿಕಾರಿ ಪ್ರಕಾಶ್ ಭಾಗವಹಿಸಿದ್ದರು.
