ರವಿ ಕೆಳಂಗಡಿ
ಕಳಸ:ರೊಬಸ್ಟಾ ಕಾಫಿ ಬೆಲೆಯು ದಿನಕಳೆದಂತೆ ಗಗನಕ್ಕೆ ಏರುತ್ತಿದ್ದು ಗುರುವಾರ ಒಂದು ಕೆಜಿ ಕಾಫಿ ಬೇಳೆ 400 ರೂಪಾಯಿಗೆ ಮಾರಾಟವಾಯಿತು.ಇದರೊಂದಿಗೆ ರೊಬಸ್ಟಾ ಕಾಫಿ ಬೆಲೆ 400ರ ಗಡಿ ದಾಟಿದ ದಾಖಲೆ ಬರೆಯಿತು.
ಗುರುವಾರ ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿ ಟನ್ ಒಂದಕ್ಕೆ 4200 ಡಾಲರ್ ಆಸುಪಾಸಿನಲ್ಲಿ ವ್ಯಾಪಾರ ಆಗಿದೆ.ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಅರೇಬಿಕಾ ಕಾಫಿ ಪೌಂಡ್ ಒಂದಕ್ಕೆ 300 ಸೆಂಟ್ಸ್ ಧಾರಣೆ ಪಡೆದಿತ್ತು.
ಗರಿಷ್ಟ ರೊಬಸ್ಟಾ ಬೆಳೆಯುವ ವಿಯೆಟ್ನಾಂ ಮತ್ತು ಅತಿ ಹೆಚ್ಚು ಅರೇಬಿಕಾ ಕಾಫಿ ಉತ್ಪಾದಿಸುವ ಬ್ರೆಜಿಲ್ ದೇಶದಲ್ಲಿ ಪ್ರತಿಕೂಲ ಹವಾಮಾನದ ಕಾರಣಕ್ಕೆ ಜಾಗತಿಕ ಕಾಫಿ ಉತ್ಪಾದನೆ ಕುಸಿದಿದೆ.ಈ ಹಿನ್ನೆಲೆಯಲ್ಲಿ ಕಾಫಿ ಧಾರಣೆ ಎಗ್ಗಿಲ್ಲದಂತೆ ಏರುತ್ತಿದೆ ಎನ್ನಲಾಗುತ್ತಿದೆ.
ಇದರ ಜೊತೆಗೆ ವಿಯೆಟ್ನಾಂ ದೇಶದಲ್ಲಿ ಕಾಫಿ ಕೃಷಿಯ ಜಂಜಾಟಕ್ಕಿಂತ ಬೆಣ್ಣೆ ಹಣ್ಣು, ಡೂರಿಯಾನ್, ಡ್ರ್ಯಾಗನ್ ಹಣ್ಣು ಬೆಳೆಯುವುದು ಸೂಕ್ತ ಎಂಬ ಕಾರಣಕ್ಕೆ ಬಹಳಷ್ಟು ಕಾಫಿ ತೋಟಗಳಲ್ಲಿ ಕಾಫಿ ಗಿಡ ಕಿತ್ತು ಬೆಳೆ ಬದಲಾವಣೆ ಮಾಡಲಾಗಿದೆ. ಇದು ಕೂಡ ಆ ದೇಶದ ಕಾಫಿ ಉತ್ಪಾದನೆಗೆ ಕುತ್ತು ತಂದಿದೆ ಎಂದು ಆ ದೇಶಕ್ಕೆ ಭೇಟಿ ನೀಡಿದ ರಾಜ್ಯದ ಕಾಫಿ ಬೆಳೆಗಾರರು ಹೇಳುತ್ತಾರೆ.
ಬ್ರೆಜಿಲ್ ದೇಶದ ಹೆಚ್ಚಿದ ಮಳೆಯು ಅರೇಬಿಕಾ ಕಾಫಿಗೆ ಕುತ್ತು ತರುವ ಆತಂಕ ಇದೆ.ಜೊತೆಗೆ ರೊಬಸ್ಟಾ ಕಾಫಿಯ ಕಡಿತಗೊಂಡ ಪೂರೈಕೆ ಅರೇಬಿಕಾ ಖರೀದಿಯ ಮೇಲೆ ಒತ್ತಡ ಹೇರುತ್ತಿದೆ. ಇದರಿಂದಾಗಿ ಅರೇಬಿಕಾ ಬೆಲೆ ಕೂಡ ಗರಿಷ್ಟ ಮಟ್ಟಕ್ಕೆ ಏರುತ್ತಿದೆ.
ಗುರುವಾರ ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಅರೇಬಿಕಾ ಕಾಫಿ ಧಾರಣೆ ಪೌಂಡ್ಗೆ 300 ಸೆಂಟ್ಸ್ ಆಸುಪಾಸು ಇತ್ತು.
ಸ್ಥಳೀಯ ಮಾರುಕಟ್ಟೆಯಲ್ಲಿ ಅರೇಬಿಕಾ ಪಾರ್ಚಮೆಂಟ್ 50 ಕೆಜಿ ಚೀಲಕ್ಕೆ 16,900 ರೂಪಾಯಿ ಧಾರಣೆ ಇದೆ.ರೊಬಸ್ಟಾ ಪಾರ್ಚ್ಮೆಂಟ್ ಧಾರಣೆ ಅರೇಬಿಕಾ ಧಾರಣೆ ಮೀರಿಸಿ 17,100 ಆಗಿದೆ.
ದಿನೇ ದಿನೇ ಏರುತ್ತಿರುವ ಬೆಲೆಯಿಂದ ಕಾಫಿ ದಾಸ್ತಾನು ಇರುವ ಕೆಲವೇ ಕೆಲವು ಬೆಳೆಗಾರರು ಸಂತಸಗೊಂಡಿದ್ದಾರೆ.ಯಾವ ಮಟ್ಟಕ್ಕೆ ಬೆಲೆ ಏರಬಹುದು ಎಂಬ ಊಹೆಯೂ ಇಲ್ಲದೆ ಕಾಫಿ ಮಾರಾಟವನ್ನು ಮುಂದೂಡುತ್ತಿದ್ದಾರೆ.
ಈಗಾಗಲೇ ಕಾಫಿ ಮಾರಾಟ ಮಾಡಿರುವ ಬೆಳೆಗಾರರು ಮುಂದಿನ ಸಾಲಿಗೂ ಇದೇ ಬೆಲೆ ಉಳಿಯಬಹುದೇ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
