ಕಳಸ:ಸಂಸೆಯಲ್ಲಿ ಮಂಗಳವಾರ ಶಾಂತಿನಾಥ ತೀರ್ಥಂಕರ, ವರಮಹಾಲಕ್ಷ್ಮಿ ದೇವಿಯ ವಾರ್ಷಿಕ ರಥೋತ್ಸವ ಭಕ್ತರ ಉತ್ಸಾಹ ಮತ್ತು ಸಡಗರದ ನಡುವೆ ನೆರವೇರಿತು.
ಕಳೆದ ಗುರವಾರ ಇಂದ್ರಪ್ರತಿಷ್ಟೆ ಮತ್ತು ತೋರಣ ಮುಹೂರ್ತದ ಮೂಲಕ ರಥೋತ್ಸವದ ವಿಧಿಗಳು ಆರಂಭಗೊಂಡಿದ್ದವು.ಆನಂತರದ ದಿನಗಳಲ್ಲಿ ಗ್ರಾಮದ ಪ್ರತಿಯೊಂದು ಕುಟುಂಬವೂ ಜಾತ್ರೆಯಲ್ಲಿ ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಿದ್ದರು.

ಕ್ಷೇತ್ರಪಾಲ, ಬ್ರಹ್ಮಯಕ್ಷ, ಪದ್ಮಾವತಿ ದೇವಿ, ವರಮಹಾಲಕ್ಷ್ಮಿ ದೇವಿಗೆ ಆರಾಧನಾಪೂರ್ವಕ ಕಲಾರೋಪಣೆ ಮತ್ತು ನಯನೋನ್ಮಿಲನದಂತಹ ವಿಶಿಷ್ಟ ಧಾರ್ಮಿಕ ವಿಧಿಗಳು ಸಂಪ್ರದಾಯಕ್ಕೆ ತಕ್ಕಂತೆ ನೆರವೇರಿದ್ದವು.
ಮಂಗಳವಾರ ಬೆಳಿಗೆ ಶಾಂತಿನಾಥ ಸ್ವಾಮಿ, ಪಾಶ್ರ್ವನಾಥ ಸ್ವಾಮಿಗೆ ಮಹಾಭಿಷೇಕ ನೆರವೇರಿಸಿದ ನಂತರ ಸರ್ವಣ ಯಕ್ಷ ವಿಹಾರ ನಡೆಯಿತು.ಆನಂತರ ಶಾಂತಿನಾಥ ಸ್ವಾಮಿ, ವರಮಹಾಲಕ್ಷ್ಮಿ ಮತ್ತು ಸರ್ವಣ ಯಕ್ಷರ ರಥಾರೋಣ ನೆರವೇರಿತು. ವಿವಿಧ ಗ್ರಾಮಗಳಿಂದ ಬಂದಿದ್ದ ಭಕ್ತರು ರಥವನ್ನು ಉತ್ಸಾಹದಿಂದ ಎಳೆದರು.
ಬುಧವಾರ ರಾತ್ರಿ ಪದ್ಮಾವತಿ ಹಾಗೂ ವರಮಹಾಲಕ್ಷಿ ದೇವಿಯ ತೆಪ್ಪೋತ್ಸವ ನಡೆಯಲಿದೆ.ಆನಂತರ ಧರ್ಮದೇವತೆಗಳ ನೇಮೋತ್ಸವ ಕೂಡ ನಡೆಯಲಿದೆ.
