ಕಳಸ:ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ಪುಷ್ಟಿ ಕಾರ್ಯಕ್ರಮದಲ್ಲಿ ರಾಜ್ಯದ ಶ್ರೇಷ್ಟ ಶಾಲಾಭಿವೃದ್ಧಿ ಸಮಿತಿಗಳಿಗೆ ನೀಡುವ ಪ್ರಶಸ್ತಿಯನ್ನು ಕಳಸ ಕೆಪಿಎಸ್ ಶಾಲಾಭಿವೃದ್ಧಿ ಸಮಿತಿ ಪಡೆದುಕೊಂಡಿದೆ.
ಸರ್ಕಾರಿ ಶಾಲೆಗಳ ಗುಣಮಟ್ಟ, ಶಿಕ್ಷಣದ ಅಭಿವೃದ್ಧಿ ಬಗ್ಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲಾಭಿವೃದ್ಧಿ ಸಮಿತಿಗಳಿಗೆ ಪ್ರಶಸ್ತಿ ನೀಡಲು ವಿದ್ಯಾವಾಹಿನಿ ಪೋರ್ಟಲ್ ಮೂಲಕ ಸಮಿತಿಗಳ ಸಮೀಕ್ಷೆ ನಡೆಸಲಾಗಿತ್ತು.
ರಾಜ್ಯದ 44 ಸಾವಿರಕ್ಕೂ ಹೆಚ್ಚು ಶಾಲೆಗಳು ಈ ಪೋರ್ಟಲ್ ಮೂಲಕ ಸಮೀಕ್ಷೆಗೆ ಒಳಪಟ್ಟಿದ್ದವು. ಈ ಪೈಕಿ ತಾಲ್ಲೂಕಿಗೆ ಒಂದರಂತೆ ಒಟ್ಟು 204 ಶಾಲೆಗಳ ಶಾಲಾಭಿವೃದ್ಧಿ ಸಮಿತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿ ತಲಾ ಒಂದು ಲಕ್ಷ ರೂಪಾಯಿ ಹಾಗೂ ಪ್ರಶಸ್ತಿ ನೀಡಲಾಗುತ್ತಿದೆ.ಕಳಸ ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ ಕಳಸ ಕೆಪಿಎಸ್ ಶಾಲಾ ಸಮಿತಿಗೆ ಈ ಪ್ರಶಸ್ತಿ ಸಿಕ್ಕಿದೆ ಎಂದು ಕಳಸ ಕೆಪಿಎಸ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಹಮ್ಮದ್ ರಫೀಕ್ ತಿಳಿಸಿದ್ದಾರೆ.

ಪ್ರಶಸ್ತಿ ಜೊತೆಗೆ 1 ಲಕ್ಷ ರೂಪಾಯಿ ಅನುದಾನ ಸಿಗಲಿದ್ದು ಅದನ್ನು ಶಾಲೆಯ ಶೈಕ್ಷಣಿಕ ಚಟುವಟಿಕೆಗೆ ಬಳಸಿಕೊಳ್ಳಬಹುದಾಗಿದೆ. ಶಾಲೆಗೆ ಈ ಪ್ರಶಸ್ತಿ ದೊರಕಲು ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಕೂಡ ಸಹಕಾರ ನೀಡಿದ್ದಾರೆ ಎಂದು ರಫೀಕ್ ತಿಳಿಸಿದ್ದಾರೆ.
