ಕಳಸ:ಪಟ್ಟಣದ ಜನತೆಗೆ ಗುರುವಾರ ಅಚ್ಚರಿಯ ದಿನ. ಕಳಸ ತಾಲ್ಲೂಕಿನ ಸಿರಿವಂತರ ಪೈಕಿ ಒಬ್ಬರಾಗಿರುವ ಕೃಷಿಕ, ಉದ್ಯಮಿ ಕೃಷ್ಣ ಶೆಟ್ಟಿ ಅವರ ಮಗ ಡಾ. ಕಾರ್ತಿಕ್ ಶೆಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಆರಂಭಿಸಿದ್ದು ಹಲವರ ಹುಬ್ಬೇರಿಸಿತು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯ ಕಾರ್ತಿಕ್ ಶೆಟ್ಟಿ ಗುರುವಾರ ರೋಗಿಗಳ ಶುಶ್ರೂಷೆ ಆರಂಭಿಸಿದರು.
ಮಂಗಳೂರಿನಲ್ಲಿ ಎಂಬಿಬಿಎಸ್, ಎಂಡಿ, ವ್ಯಾಸಂಗ ಮಾಡಿರುವ ಕಾರ್ತಿಕ್ ಶೆಟ್ಟಿ ಕಳಸದ ಕೃಷ್ಣ ಶೆಟ್ಟಿ, ಕಸ್ತೂರಿ ಶೆಟ್ಟಿ ದಂಪತಿಯ ಪುತ್ರ. ಕಳಸ ಆಸ್ಪತ್ರೆಯಲ್ಲಿ ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅವರನ್ನು ಅಭಿನಂದಿಸಿ ಜನಸೇವೆ ಮಾಡುವಂತೆ ಹುರಿದುಂಬಿಸಿದರು.
ಪಂಚಾಯಿತಿ ಸದಸ್ಯ ರಂಗನಾಥ್ ಮಾತನಾಡಿ, ಕಳಸ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಇಲ್ಲದಿರುವುದನ್ನು ಮನಗಂಡು ಕೃಷ್ಣ ಶೆಟ್ಟರು ಇಲ್ಲಿ ಸೇವೆ ಸಲ್ಲಿಸಲು ತಮ್ಮ ಪುತ್ರನನ್ನೇ ಮನವೊಲಿಸಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ ಮಾತನಾಡಿ, ಕಳಸದಲ್ಲಿ ಕೊರತೆ ಇದ್ದ ತಜ್ಞ ವೈದ್ಯರ ಹುದ್ದೆಗೆ ಕಾರ್ತಿಕ್ ಅವರು ಬಂದಿರುವುದು ಕಳಸದ ಜನರ ಸುದೈವ ಎಂದರು.ಆರೋಗ್ಯ ರಕ್ಷಾ ಸಮಿತಿಯ ಲಕ್ಷ್ಮಣಾಚಾರ್ ಮಾತನಾಡಿ ಕಳಸ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯ ಇದ್ದರೂ ಒಳ್ಳೆ ವೈದ್ಯರು ಇಲ್ಲ ಎಂಬ ಕೊರತೆ ಇತ್ತು ಕಾರ್ತಿಕ್ ಶೆಟ್ಟಿ ಆ ಕೊರತೆ ನೀಗಿಸಲಿ ಎಂದು ಹಾರೈಸಿದರು.
ರಕ್ಷಾ ಸಮಿತಿ ಸದಸ್ಯ ಕೆ.ಎಲ್.ವಾಸು ಮಾತನಾಡಿ, ಕಾರ್ತಿಕ್ ಶೆಟ್ಟಿ ಸಿರಿವಂತ ಕುಟುಂಬದಿಂದ ಬಂದರೂ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಮಾಡುವ ಇಚ್ಛೆ ತೋರಿದ್ದಾರೆ.ಅವರಿಂದ ಬಡವರಿಗೆ ಈ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಿಗಲಿ ಎಂದರು.
ಪಂಚಾಯಿತಿ ಸದಸ್ಯರಾದ ವೀರೇಂದ್ರ, ಕಾರ್ತಿಕ್, ಸಂಶುದ್ದೀನ್, ನಹೇಶ್, ದಿನೇಶ್, ಆಸ್ಪತ್ರೆ ಸಿಬ್ಬಂದಿ ಇದ್ದರು.
