ಕಳಸ:ತಾಲ್ಲೂಕಿನ ಈ ಸಾಲಿನ ಫಸಲ್ಬಿಮಾ ಬೆಳೆ ವಿಮೆಯ ಪರಿಹಾರವು ಅತ್ಯಂತ ಕನಿಷ್ಟ ಮೊತ್ತವಾಗಿದೆ. ಇದನ್ನು ಖಂಡಿಸಿ ಕಳಸ ತಾಲ್ಲೂಕಿನ ಕೃಷಿಕರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನ ಮಾಡಿದ್ದಾರೆ.
ಈ ಬಾರಿ ವರ್ಷವಿಡೀ ಮಳೆ ಸುರಿದಿದ್ದು ಅಡಿಕೆಗೆ ಎಲೆಚುಕ್ಕಿ ರೋಗ ಉಲ್ಬಣ ಆಗಿದೆ. ಅಡಿಕೆ ಫಸಲು ಶೇ.30ರಷ್ಟು ಕೂಡ ಇಲ್ಲವಾಗಿದೆ. ಕಾಳುಮೆಣಸಿಗೂ ಬಗೆಬಗೆಯ ರೋಗ ತಗಲಿ ಶೇ.50ರಷ್ಟು ಬೆಳೆ ನಷ್ಟ ಆಗಿದೆ.ಆದ್ದರಿಂದ ಬೆಳೆಗಾರರು ಬೆಳೆವಿಮೆಯ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಅತ್ಯಂತ ಕಡಿಮೆ ಬೆಳೆ ವಿಮೆ ಸಿಗುತ್ತಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ ಎಂದು ಶೇಷಗಿರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಗಳವಾರದಿಂದ ಬೆಳೆಗಾರರಿಗೆ ಬೆಳೆವಿಮೆ ಖಾತೆಗೆ ಜಮಾ ಆಗುತ್ತಿದ್ದು ಕಾಳುಮೆಣಸಿಗೆ ಹೆಕ್ಟೇರಿಗೆ 1000-1200 ರೂಪಾಯಿ ಬಂದಿದೆ. ಅಡಿಕೆ ತೋಟಗಳಿಗೆ ಎಕರೆಗೆ 5000-6000 ರೂಪಾಯಿ ಜಮಾ ಆಗಿದೆ. ಈ ಕನಿಷ್ಟ ಪ್ರಮಾಣದ ವಿಮಾ ಪರಿಹಾರದ ಅನ್ಯಾಯ ಖಂಡಿಸಿ, ನ್ಯಾಯಯುತ ಪರಿಹಾರಕ್ಕೆ ಆಗ್ರಹಿಸಿ ಕಳಸ ತಾಲ್ಲೂಕಿನ ನೂರಾರು ಕೃಷಿಕರು ಗ್ರಾಹಕರ ನ್ಯಾಯಾಲಯಕ್ಕೆ ಮೊಕದ್ದಮೆ ದಾಖಲಿಸುತ್ತೇವೆ. ತೋಟಗಾರಿಕಾ ಇಲಾಖೆ ಕೂಡ ಈ ಬಗ್ಗೆ ಸಮರ್ಪಕ ಕ್ರಮ ವಹಿಸಿಲ್ಲ ಎಂದೂ ಅವರು ದೂರಿದ್ದಾರೆ.
ಕನಿಷ್ಟ ಬೆಳೆ ವಿಮಾ ಪರಿಹಾರದ ಬಗ್ಗೆ ಸಂಸದರ ಗಮನ ಸೆಳೆಯಲಾಗಿದೆ. ಇನ್ಸೂರೆನ್ಸ್ ಕಂಪನಿ ಮತ್ತು ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಿಗಳ ಪಿತೂರಿಯಿಂದಾಗಿ ಕೃಷಿಕರಿಗೆ ಅನ್ಯಾಯ ಆಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಶೇಷಗಿರಿ ಒತ್ತಾಯಿಸಿದ್ದಾರೆ.
ಮುನ್ನೂರುಪಾಲಿನ ಕೃಷಿಕ ಪ್ರಮೋದ್ ಭಾರತಿಪುರ ಕೂಡ ಕೃಷಿಕರಿಗೆ ನ್ಯಾಯಯುತ ಬೆಳೆ ವಿಮೆ ಪರಿಹಾರ ಪಡೆಯಲು ಹೋರಾಟ ಅನಿವಾರ್ಯ ಆಗಿದೆ ಎನ್ನುತ್ತಾರೆ.
