ಕಳಸ:ತಾಲ್ಲೂಕಿನ ಬಹುತೇಕ ಖಾಯಂ ಶಿಕ್ಷಕರು ಶಾಲೆಗೆ ವಿಳಂಬವಾಗಿ ಬರುತ್ತಿದ್ದು ಅತಿಥಿ ಶಿಕ್ಷಕರೇ ಅವರ ಕೆಲಸ ಮಾಡುತ್ತಿದ್ದಾರೆ ಎಂದು ಸಿಪಿಐ ಮುಖಂಡ ಕೆಳಗೂರು ರಮೇಶ್ ದೂರಿದರು.
ಪಟ್ಟಣದಲ್ಲಿ ನಿನ್ನೆ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ , ಕ್ರೀಡಾಕೂಟ ಮತ್ತಿತರ ಕಾರ್ಯಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ದೇಣಿಗೆ ಕೊಡುವ ಈ ಖಾಯಂ ಶಿಕ್ಷಕರು ತಾವು ಶಾಲೆಗೆ ಬರುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಇಂತಹ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ಕಳಸ ಸಮುದಾಯ ಆರೋಗ್ಯ ಕೇಂದ್ರದ ಅನೇಕ ಸಿಬ್ಬಂದಿ ದಿನಕ್ಕೆ 4-5 ಗಂಟೆ ಕೂಡ ಕೆಲಸ ಮಾಡುತ್ತಿಲ್ಲ. 11 ಗಂಟೆವರೆಗೂ ಆಸ್ಪತ್ರೆಗೆ ಬಾರದೆ ಕರ್ತವ್ಯಚ್ಯುತಿ ಎಸಗುತ್ತಿದ್ದಾರೆ ಎಂದೂ ರಮೇಶ್ ಗುರುತರ ಆರೋಪ ಮಾಡಿದರು.
ಸಮಾಜದಲ್ಲಿ ಯಾವುದೇ ಅಕ್ರಮ ಚಟುವಟಿಕೆ, ಶಾಂತಿ ಕದಡುವ ಯತ್ನ ನಡೆಯುತ್ತಿದ್ದರೆ ಅದನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ಹೇಳಿದರು.

ವಾಟ್ಸಾಪ್ ಗುಂಪುಗಳಲ್ಲಿ ವಿವಾದಾತ್ಮಕ ಪೋಸ್ಟ್ ಬಂದಾಗ ಆ ಬಗ್ಗೆ ಪ್ರತಿಕ್ರಿಯೆ ತೋರುವ ಮುನ್ನ ಆಲೋಚನೆ ಮಾಡಿ. ನಿಮ್ಮ ಸುತ್ತಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವಜನತೆ ಚಲನವಲನದ ಬಗ್ಗೆ ಕಣ್ಣಿಡಿ.ಯಾವುದೇ ಅಪರಾಧ ಚಟುವಟಿಕೆ ಬಗ್ಗೆ ಮಾಹಿತಿ ಇದ್ದರೆ ಬೀಟ್ ಪೊಲೀಸರಿಗೆ ಮಾಹಿತಿ ಕೊಡಿ.ಮಾದಕ ದ್ರವ್ಯ ಸೇರಿದಂತೆ ಎಲ್ಲ ಅಪರಾಧ ಚಟುವಟಿಕೆ ನಿಗ್ರಹ ಮಾಡಲು ಇಲಾಖೆ ಬದ್ಧವಾಗಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಮುಖಂಡ ರಫೀಕ್, ಕಳಸದಲ್ಲಿ ಮಾದಕದ್ರವ್ಯ ಮಾರಾಟದ ಜಾಲ ಮತ್ತು ಕಳಸ ಎಸ್ಟೇಟ್ ಬಗ್ಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಕೆಲವರು ಸ್ವಾರ್ಥದಿಂದ ಆರೋಪ ಮಾಡಿದ್ದಾರೆ.ಮಾದಕ ದ್ರವ್ಯ ಸೇವನೆ, ಮಾರಾಟ ಮಾಡುತ್ತಿದ್ದಲ್ಲಿ ಅವರ ಮೇಲೆ ಮುಲಾಜಿಲ್ಲದೆ ಕ್ರಮ ಆಗಬೇಕು ಎಂದರು.

ಕೆ.ಸಿ.ಧರಣೇಂದ್ರ ಮಾತನಾಡಿ, ಕಳಸದಲ್ಲಿ ಮಾದಕ ದ್ರವ್ಯದ ಹಾವಳಿ ಇಲ್ಲ. ಆದರೆ ಹಳ್ಳಿಗಳಲ್ಲಿ ಮದ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು ಇದನ್ನು ತಡೆಯಬೇಕು.ಸಾಗುವಳಿ ಚೀಟಿ ವಜಾ ಆಗುತ್ತಿರುವುದರಿಂದ ಕೃಷಿಕರಿಗೆ ಆತಂಕ ಆಗಿದೆ. ಇನ್ನೊಂದೆಡೆ ವನ್ಯಮೃಗಗಳು ಕೂಡ ಕೃಷಿಗೆ ತೊಡಕಾಗಿದೆ ಎಂದರು.
ಕೆಂಗನಕೊಂಡ ರಾಮಪ್ರಕಾಶ್ ಮಾತನಾಡಿ, ಪ್ರವಾಸೋದ್ಯಮ ಬೆಳೆಯಬೇಕು ಎಂದು ಹೇಳುವ ಸರ್ಕಾರ ಹೋಂಸ್ಟೇ ಪರವಾನಗಿ ಪಡೆಯಲು ಅತ್ಯಂತ ಕಠಿಣ ನಿಯಮಾವಳಿ ರೂಪಿಸಿದೆ ಎಂದರು.
ವಿದೇಶದಲ್ಲಿ ನೆಲೆಸಿದ ಸಿರಿವಂತರಿಗೆ ನೂರಾರು ಎಕರೆ ಭೂಮಾಲಿಕತ್ವ ಮತ್ತು ಭೂಮಿ ಒತ್ತುವರಿಗೆ ಅವಕಾಶ ಇದೆ. ಆದರೆ ನೂರಾರು ವಸತಿರಹಿತ ಮೂಲ ನಿವಾಸಿಗಳಿಗೆ ಒಂದು ನಿವೇಶನ ಕೊಡಲು ಕೂಡ ಯಾಕೆ ಆಗುತ್ತಿಲ್ಲ ಎಂದು ಅಧಿಕಾರಿಗಳ ಕಾಳೆಳೆದರು.
ತಹಶೀಲ್ದಾರ್ ಕಾವ್ಯ ಮಾತನಾಡಿ, 94ಸಿ ಅರ್ಜಿ ಸಲ್ಲಿಸಿದ ಅರ್ಹರಿಗೆ ನಿವೇಶನದ ಹಕ್ಕುಪತ್ರ ಸಿಗಲಿದೆ. ಅರಣ್ಯದ ತೊಡಕಿನ ಕಾರಣ ಹಲವಾರು ಅರ್ಜಿ ಬಾಕಿ ಉಳಿದಿದೆ.ಮಾದಕ ವಸ್ತುಗಳು ಯಾವುದೇ ಕಾರಣಕ್ಕೂ ಶಾಲಾ, ಕಾಲೇಜು ಮಕ್ಕಳಿಗೆ ಸಿಗಬಾರದು ಎಂಬುದು ನಮ್ಮ ಕಾಳಜಿ. ಆ ಬಗ್ಗೆ ಜನರು ಅಧಿಕಾರಿಗಳಿಗೆ ಮಾಹಿತಿ ಕೊಟ್ಟರೆ ಕಟ್ಟುನಿಟ್ಟಿನ ಕ್ರಮ ವಹಿಸುತ್ತೇವೆ ಎಂದರು.
ಕುದುರೆಮುಖ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್, ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಗೌಡ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
