ಕಳಸ: ಸರ್ಕಾರಿ ಶಾಲಾ ಶಿಕ್ಷಕರು ವಿಳಂಬವಾಗಿ ಶಾಲೆಗೆ ಬರುತ್ತಿದ್ದಾರೆ.ಅತಿಥಿ ಶಿಕ್ಷಕರೇ ಶಾಲೆ ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ ಎಂದು ಇತ್ತೀಚೆಗೆ ಕಳಸದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಿಪಿಐ ಮುಖಂಡ ಕೆಳಗೂರು ರಮೇಶ್ ದೂರಿದ್ದರು.
ಇದಕ್ಕೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ, ಸರ್ಕಾರಿ ಶಿಕ್ಷಕರು ಪ್ರತಿದಿನವೂ ಶಾಲೆ ಆರಂಭವಾಗುವ ಅರ್ಧ ಗಂಟೆ ಮೊದಲೇ ಶಾಲೆಗೆ ಬರಬೇಕು ಎಂದು ಸೂಚನೆ ನೀಡಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ಎಲ್ಲ ಸಿಬ್ಬಂದಿ ಪ್ರತಿದಿನ ಕಡ್ಡಾಯವಾಗಿ 9.45 ರಿಂದ 4.30ರವರೆಗೆ ಶಾಲೆಯಲ್ಲಿ ಇರಬೇಕು ಎಂದು ತಿಳಿಸಿದ್ದಾರೆ.ಶನಿವಾರ ಈ ಅವಧಿ 9.45 ರಿಂದ 1.30 ಆಗಿದ್ದು ಇದನ್ನು ಕೂಡ ಕಡ್ಡಾಯವಾಗಿ ಪಾಲಿಸಬೇಕು.
ಶಾಲೆಗೆ ವಿಳಂಬವಾಗಿ ಹೋಗುವುದು ಮತ್ತು ಬೇಗನೇ ಶಾಲೆಯಿಂದ ನಿರ್ಗಮಿಸುವ ಶಿಕ್ಷಕರ ಬಗ್ಗೆ ಸಿಆರ್ಪಿ ಮಾಹಿತಿ ನೀಡಬೇಕು. ಅಂತಹ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ವಹಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಾಲ್ಲೂಕಿನ ಎಲ್ಲ ಶಾಲೆಗಳಿಗೂ ಕಳಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
