ಕಳಸ:ಕಳೆದ ಎರಡು ದಿನಗಳಲ್ಲಿ ಕಳಸದಲ್ಲಿ ಎರಡು ಸಮಸ್ಯೆ ನಿವಾರಣೆ ಬಗ್ಗೆ ಹೃದಯವಂತರು ವಾಟ್ಸಾಪ್ ಗುಂಪಿನಲ್ಲಿ ಪ್ರಸ್ತಾಪ ಆಯಿತು.ಇದಕ್ಕೆ ಕಳಸ ತಾಲ್ಲೂಕಿನ ದಾನಿಗಳು ತುರ್ತಾಗಿ ಸ್ಪಂದಿಸಿದ ರೀತಿ ಅದ್ಭುತವಾಗಿತ್ತು.
ಸಂಸೆ ಸಮೀಪದ ಬಾಳಗಲ್ ಕೋರೆ ನಿವಾಸಿ ಸಿಂಚನ ಎಸ್ಸೆಸ್ಸಲಿಯಲ್ಲಿ ಶೇ.94 ಅಂಕ ಗಳಿಸಿ ಕಾರ್ಕಳದ ಕಾಲೇಜಿನಲ್ಲಿ ಪ್ರವೇಶ ಪಡೆದರೂ ಅತ್ಯಂತ ಕಡುಬಡತನದ ಕಾರಣಕ್ಕೆ ಹಾಸ್ಟೆಲ್ ಮತ್ತು ಬಟ್ಟೆ ಬರೆಗೆ ಹಣ ಇಲ್ಲದೆ ಪರದಾಡುತ್ತಿರುವ ಸುದ್ದಿ ಮೊದಲನೆಯದು. ಎರಡನೆಯದು 2 ವಾರದ ಹಿಂದೆ ಕಳಸದ ಮಹಾವೀರ ರಸ್ತೆಯಲ್ಲಿ ಕಾರು-ಬೈಕ್ ನಡುವಿನ ಅಪಘಾತದಲ್ಲಿ ಕೋಮಾಗೆ ಹೋಗಿರುವ ಗಿರಿಜನ ಯುವ ಜನಾರ್ಧನ ಅವರ ಆರೋಗ್ಯದ ದುಸ್ಥಿತಿಯ ಸಂಗತಿ.

ವಾಟ್ಸಾಪ್ ಗುಂಪಿನಲ್ಲಿ ಸಿಂಚನ ಪರವಾಗಿ ನೆರವಿಗಾಗಿ ಮೊರೆ ಇಟ್ಟ ಕೂಡಲೇ ಕಳಸ ಮತ್ತು ಸಂಸೆ ಗ್ರಾಮದ ಸಹೃದಯಿ ದಾನಿಗಳು ದೇಣಿಗೆ ವರ್ಗಾವಣೆ ಮಾಡಲು ಶುರು ಮಾಡಿದರು. ಕಳಸದ ಎಲೆಕ್ಟ್ರಿಕಲ್ ಗುತ್ತಿಗೆದಾರ ರಾಜೇಶ್ ಬಿಳಲ್ಗೋಡು ಸಿಂಚನಾ ಮನೆಗೆ ಸೋಲಾರ್ ದೀಪ ಕೊಡುವುದರ ಜೊತೆಗೆ ಭವಿಷ್ಯದಲ್ಲಿ ಮನೆ ನಿರ್ಮಿಸಿದಲ್ಲಿ ಉಚಿತ ವಿದ್ಯುತ್ ಸಂಪರ್ಕ ಮತ್ತು ವೈರಿಂಗ್ ಮಾಡುವ ವಾಗ್ದಾನ ನೀಡಿದರು. ಕಳಸ ಮೂಲದ ಬ್ಯಾಂಕ್ ಉದ್ಯೋಗಿ ಸುಬ್ರಮಣ್ಯ ಜೋಗಿಕುಂಬ್ರಿ ಕೂಡ ಸಿಂಚನ ಮನೆಗೆ ಬ್ಯಾಂಕಿನ ಪರವಾಗಿ ನೆರವು ನೀಡುವ ಭರವಸೆ ನೀಡಿದರು.
ಸಿಂಚನ ಸಂಕಷ್ಟವನ್ನು ಗಮನಿಸಿದ ಹೃದಯವಂತರು ವಾಟ್ಸಾಪ್ ಗುಂಪಿನ ಸದಸ್ಯರೂ ಆದ ಶಾಸಕಿ ನಯನಾ ಮೋಟಮ್ಮ ವಾಟ್ಸಾಪ್ ಗುಂಪಿನಲ್ಲೇ ವಿದ್ಯಾರ್ಥಿನಿಗೆ ಬೇಕಾದ ನೆರವಿನ ಬಗ್ಗೆ ಮಾಹಿತಿ ಪಡೆದುಕೊಂಡರು.

ಕಾರ್ಕಳದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಸಿಂಚನ ಬಳಿಗೆ ಕಳಿಸಿದ ನಯನಾ ಮೋಟಮ್ಮ ವೈಯಕ್ತಿಕವಾಗಿ 10 ಸಾವಿರ ನೆರವು ನೀಡಿದರು. ಕಾರ್ಕಳದ ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ಸಿಂಚನಾಗೆ ಪ್ರವೇಶ ಒದಗಿಸಲು ಕೂಡ ಶಾಸಕಿ ಮುತುವರ್ಜಿ ವಹಿಸಿದರು. ಸಿಂಚನ ತಾಯಿಗೆ ಮನೆ ಮಂಜೂರು ಮಾಡಲು ಅಗತ್ಯ ಕ್ರಮ ವಹಿಸುವಂತೆಯೂ ಶಾಸಕಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಳಸ ತಹಶೀಲ್ದಾರ್ ಕಾವ್ಯ ಕೂಡ ಸಿಂಚನಾ ತಾಯಿಯ ಮನೆ ದುಸ್ಥಿತಿ ಬಗ್ಗೆ ಮರುಗಿ ಸ್ಥಳ ಪರಿಶೀಲನೆ ಮಾಡಲು ಕ್ರಮ ವಹಿಸಿದರು.ಒಟ್ಟಾರೆ ಪ್ರತಿಭಾವಂತ ವಿದ್ಯಾರ್ಥಿನಿಯ ವಿದ್ಯಾಭ್ಯಾಸದ ಜೊತೆಗೆ ಆಕೆಯ ಮನೆಯ ಸಮಸ್ಯೆ ಬಗ್ಗೆಯೂ ಸಹೃದಯರು ಮರುಗಿ ತುರ್ತು ಪರಿಹಾರ ಒದಗಿಸಿದಂತೆ ಆಯಿತು.
ಎರಡನೇ ವಿಚಾರದಲ್ಲಿ, 2 ವಾರದ ಹಿಂದಿನ ಅಪಘಾತದಲ್ಲಿ ಗಾಯಗೊಂಡ ಜನಾರ್ದನ ಅವರ ಚಿಕಿತ್ಸೆಗೆ ಸ್ಥಳೀಯರು ಧನಸಹಾಯ ಮಾಡಿದರು. ಶಾಸಕಿ ನಯನಾ ಮೋಟಮ್ಮ ಮಂಗಳೂರಿನ ಎಜೆ ಆಸ್ಪತ್ರೆ ಸಂಪರ್ಕಿಸಿ ಆಯುಷ್ಮಾನ್ ಕಾರ್ಡ್ ಬಳಸಿ ಜನಾರ್ಧನ ಅವರ ಚಿಕಿತ್ಸೆಗೆ ಅವಕಾಶ ಇದೆಯೆ ಎಂಬ ಬಗ್ಗೆ ಮಾಹಿತಿ ಪಡೆದರು. ಹೊರನಾಡಿನ ಗಿರಿಜಾಶಂಕರ ಜೋಷಿ ಮತ್ತು ಕಳಸದ ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್ ಕೂಡ ಜನಾರ್ದನ ಅವರ ಚಿಕಿತ್ಸೆ ಬಗ್ಗೆ ಮುತುವರ್ಜಿ ವಹಿಸಿದ್ದಾರೆ. ಜನಾರ್ಧನ ಅವರ ದೀರ್ಘ ಕಾಲಿಕ ಚಿಕಿತ್ಸೆಗೆ ಬಹಳಷ್ಟು ನೆರವಿನ ಅಗತ್ಯ ಇದ್ದೇ ಇದೆ.
ಒಟ್ಟಾರೆ, ಎರಡೂ ವಿಚಾರದಲ್ಲಿ ಕಳಸ ತಾಲ್ಲೂಕಿನ ಜನರು ತಮ್ಮ ಹೃದಯವಂತಿಕೆ ತೋರಿ ಎರಡು ಬಡ ಕುಟುಂಬಗಳ ಪಾಲಿಗೆ ಆಧಾರದಂತೆ ನಿಂತಿದ್ದು ಕಳಸದ ನಾಗರೀಕರ ಪರೋಪಕಾರ, ದಾನ ಸ್ವಭಾವಕ್ಕೆ ಕನ್ನಡಿ ಹಿಡಿಯಿತು.
