ಕಳಸ:ಸತತ ಮಳೆಯಿಂದ ಪಟ್ಟಣದ ಮುಖ್ಯರಸ್ತೆ ಬಹಳಷ್ಟು ಹಾನಿಗೀಡಾಗಿದ್ದು ದುರಸ್ತಿಗಾಗಿ ಹಣ ಬಿಡುಗಡೆ ಆಗಿದೆ.
ಮಹಾವೀರ ವೃತ್ತದಿಂದ ಮಂಜಿನಕಟ್ಟೆವರೆಗಿನ ಡಾಂಬರು ರಸ್ತೆಯ ಮೂಲ ಸ್ವರೂಪವೇ ಬದಲಾಗಿದೆ. ರಸ್ತೆಯ ಉದ್ದಕ್ಕೂ ನೂರಾರು ಗುಂಡಿಗಳು ಮೂಡಿವೆ. ಕೆಲವೆಡೆ ಅರ್ಧ ಅಡಿಯಷ್ಟು ಆಳಕ್ಕೂ ಗುಂಡಿಗಳು ಇದ್ದು ವಾಹನ ಚಲಾಯಿಸಲು ಹರಸಾಹಸ ಪಡಬೇಕಾಗಿದೆ.
ಇದೇ ರಸ್ತೆಯಲ್ಲಿ ಪ್ರತಿದಿನ ನೂರಾರು ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿನಿಯರು ಓಡಾಡುತ್ತಾರೆ. ಆದರೆ ವಾಹನಗಳು ಚಲಿಸುವಾಗ ಗುಂಡಿಗಳಲ್ಲಿನ ನೀರು ಮಕ್ಕಳ ಮೈಗೆ ರಾಚುತ್ತಿದೆ. ವಿದ್ಯಾರ್ಥಿಗಳು ವಾಹನ ಚಾಲಕರನ್ನು ಶಪಿಸಿ ಶಾಲೆಗೆ ಒದ್ದೆ ಬಟ್ಟೆ ಧರಿಸಿಕೊಂಡೇ ಹೋಗುತ್ತಿದ್ದಾರೆ.
ಈ ರಸ್ತೆಯನ್ನು ಮೂರು ವರ್ಷದ ಹಿಂದೆ ನಿರ್ಮಾಣ ಮಾಡಿದಾಗಲೇ ಕಳಪೆ ಕಾಮಗಾರಿ ನಡೆದಿತ್ತು. ಇದೀಗ ರಸ್ತೆಯ ಮೇಲೆಯೇ ಮಳೆ ನೀರು ಹರಿಯುತ್ತಿದ್ದು ರಸ್ತೆಗೆ ಇನ್ನಷ್ಟು ಹಾನಿ ಆಗುತ್ತಲೇ ಇದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಈ ರಸ್ತೆಯ ದುರಸ್ತಿಗೆ ಈಗಾಗಲೇ ೧ ಕೋಟಿ ರೂಪಾಯಿ ಇರಿಸಲಾಗಿದೆ.ಲೋಕೋಪಯೋಗಿ ಇಲಾಖೆ ಈ ರಸ್ತೆ ದುರಸ್ತಿಯನ್ನು ಮಳೆಗಾಲದ ನಂತರ ಮಾಡಲಿದೆ ಎಂದು ಶಾಸಕರ ಕಾರ್ಯದರ್ಶಿ ಸಂಶುದ್ದೀನ್ ತಿಳಿಸಿದ್ದಾರೆ.
