ಕಳಸ:ಭಾನುವಾರದಿಂದ ಮಂಗಳವಾರದವರೆಗೆ ತಾಲ್ಲೂಕಿನಾದ್ಯಂತ ವಿದ್ಯುತ್ ಪೂರೈಕೆ ನಿಂತ ಕಾರಣಕ್ಕೆ ಗ್ರಾಹಕರು ಮೆಸ್ಕಾಂ ವಿರುದ್ಧ ಕಿಡಿ ಕಾರಿದ್ದಾರೆ.
ವೇಗವಾದ ಗಾಳಿ ಬೀಸಿದ ಕಾರಣಕ್ಕೆ ಬಾಳೆಹೊನ್ನೂರಿನಿಂದ ಕಳಸಕ್ಕೆ ವಿದ್ಯುತ್ ಸಾಗಿಸುವ ೩೩ ಕೆವಿ ಸಾಮರ್ಥ್ಯದ ಮಾರ್ಗದ ಮೇಲೆ ಮರಗಳು ಬಿದ್ದಿವೆ. ಇದರ ಪರಿಣಾಮವಾಗಿ ಈ ಮಾರ್ಗದ ಟವರ್ ಗಳು ಮುರಿದಿವೆ. ಕಾಡಿನ ನಡುವೆ ಈ ಟವರ್ ಮರುಸ್ಥಾಪನೆಯ ಕೆಲಸ ಕ್ಕೆ ಸಮಯ ಹಿಡಿಯುತ್ತಿದೆ ಎಂಬುದು ಮೆಸ್ಕಾಂ ಮಾಹಿತಿ.
ಆದರೆ ಈ ವರ್ಷದಲ್ಲಿ ಇದು ಐದನೇ ಬಾರಿ ಇಂತಹ ದೀರ್ಘ ಅವಧಿಯ ವಿದ್ಯುತ್ ಕಡಿತ ಆಗುತ್ತಿರುವುದು. ಮೆಸ್ಕಾಂ ಈ ಬಗ್ಗೆ ಸಾಕಷ್ಟು ಪೂರ್ವ ತಯಾರಿ ಮತ್ತು ಮರ ಕಡಿತಲೆ ಮಾಡದೆ ಇರುವುದರಿಂದ ಗ್ರಾಹಕರಿಗೆ ಸಂಕಟ ಆಗುತ್ತಿದೆ ಎಂಬ ದೂರು ಬಲವಾಗಿದೆ.
ಬಾಳೆಹೊನ್ನೂರಿನಿಂದ ನೇಮನಹಳ್ಳಿ- ಬಾಳೆಹೊಳೆ ಮೂಲಕ ಕಳಸಕ್ಕೆ ೩೩ ಕೆವಿ ವಿದ್ಯುತ್ ಸಾಗಾಟ ನಡೆಯುತ್ತದೆ. ಈ ಪೈಕಿ ನೇಮನಹಳ್ಳಿಯಿಂದ ಬಾಳೆಹೊಳೆ ಸಮೀಪದ ಫ್ಲೋರಾ ಎಸ್ಟೇಟ್ವರೆಗೆ ೧೨ ಕಿ.ಮೀ ದಟ್ಟವಾದ ಕಾಡಿನ ನಡುವೆ ವಿದ್ಯುತ್ ಮಾರ್ಗ ಬಂದಿದೆ. ಈ ಕಾಡಿನ ಎರಡೂ ಬದಿ ಅತ್ಯಂತ ದೊಡ್ಡ ಮರಗಳು ಇವೆ. ವೇಗವಾದ ಗಾಳಿಗೆ ವಿದ್ಯುತ್ ಮಾರ್ಗದ ಎರಡೂ ಬದಿಯ ಕಾಡಿನಿಂದ ಮರಗಳು ವಿದ್ಯುತ್ ಲೈನ್ ಮೇಲೆಯೇ ಬೀಳುತ್ತಿವೆ.
೪ ವರ್ಷದ ಹಿಂದೆ ಈ ಮಾರ್ಗದಲ್ಲಿ ಕೋಟಿಗಟ್ಟಲೆ ವೆಚ್ಚದಲ್ಲಿ ಹೊಸದಾಗಿ ಟವರ್ ನಿರ್ಮಿಸಿ ಗುಣಮಟ್ಟದ ವಿದ್ಯುತ್ ತಂತಿ ಅಳವಡಿಸಲಾಗಿದೆ. ತಂತಿಯ ಗುಣಮಟ್ಟದಿಂದಾಗಿ ಮರ ಬಿದ್ದರೂ ತಂತಿ ತುಂಡಾಗುತ್ತಿಲ್ಲ. ಬದಲಿಗೆ ಟವರ್ಗಳೇ ಮುರಿದುಹೋಗುತ್ತಿವೆ. ಈ ಟವರ್ಗಳ ದುರಸ್ತಿಗೆ ಸಂಪರ್ಕ ರಸ್ತೆಯೇ ಇಲ್ಲದ ಕಾಡಿನೊಳಗೆ ಅಗತ್ಯ ಸಲಕರಣೆಗಳನ್ನು ಹೊತ್ತುಕೊಂಡು ಹೋಗಿ ದುರಸ್ತಿ ಮಾಡಬೇಕಾದ ಅನಿವಾರ್ಯತೆ ಮೆಸ್ಕಾಂ ಸಂಸ್ಥೆಗೆ ಇದೆ.
ದಟ್ಟವಾದ ಕಾಡಿನಲ್ಲಿ ಸುರಿಮಳೆ, ಗಾಳಿ ಇದ್ದಾಗ ಮರುಜೋಡಣೆಯ ಕೆಲಸ ವಿಳಂಬ ಆಗುತ್ತದೆ ಎಂಬುದು ಮೆಸ್ಕಾಂ ವಾದ. ಸೋಮವಾರ ರಾತ್ರಿ ಈ ಮಾರ್ಗದ ಪರಿಶೀಲನೆಗೆ ಹೋಗಿದ್ದ ಒಬ್ಬ ಲೈನ್ಮನ್ ಮತ್ತು ಗುತ್ತಿಗೆ ಕಾರ್ಮಿಕ ಕಾಡಾನೆ ಕಂಡು ದಾರಿ ತಪ್ಪಿದ್ದರು. ಅವರನ್ನು ರಾತ್ರಿಯಿಡೀ ಕಾಡಿನಲ್ಲಿ ಹುಡುಕಾಡಿದರೂ ಸಿಗದೆ ಕೊನೆಗೆ ಅವರೇ ಬಸರೀಕಟ್ಟೆವರೆಗೆ ನಡೆದುಕೊಂಡು ಊರು ತಲುಪಿದ್ದರು.
ಇಂತಹ ಸನ್ನಿವೇಶ ತಡೆಯಲು ಬಾಳೆಹೊನ್ನೂರಿನಿಂದ ಕಳಸದವರೆಗೆ ರಸ್ತೆ ಪಕ್ಕದಲ್ಲೇ ೩೩ ಕೆವಿ ಮಾರ್ಗ ಅಳವಡಿಸಬೇಕು ಎಂದು ಉದ್ಯಮಿ ಜಯಕುಮಾರ ಭಟ್ ಒತ್ತಾಯಿಸುತ್ತಾರೆ. ರಾಜ್ಯ ಹೆದ್ದಾರಿ ಪಕ್ಕದಲ್ಲೇ ವಿದ್ಯುತ್ ಮಾರ್ಗ ಅಳವಡಿಸಿದರೆ ದುರಸ್ತಿಗೆ ಹೆಚ್ಚು ಕಾಲ ಹಿಡಿಯುವುದಿಲ್ಲ.ಜೊತೆಗೆ ದುರಸ್ತಿಗೆ ಅಗತ್ಯ ಸಲಕರಣೆಗಳನ್ನು ಕೂಡ ಸುಲಭದಲ್ಲಿ ಒದಗಿಸಬಹುದು ಎಂಬುದು ಅವರ ಅಭಿಪ್ರಾಯ.
