ಕಳಸ:ಎಳೆ ವಯಸ್ಸಿನಲ್ಲೇ ಎಡೆಬಿಡದ ದುಡಿಮೆಗೆ ತನ್ನನ್ನು ಒಡ್ಡಿಕೊಂಡಿದ್ದ ಶಮಂತ(೨೨) ಜಗತ್ತಿಗೆ ಕಳೆದ ಗುರುವಾರ ಗುಡ್ ಬೈ ಹೇಳಿ ಹೊರಟೇ ಹೋದ.
‘ಉದ್ಯೋಗಂ ಪುರುಷ ಲಕ್ಷಣಂ’ ಎಂಬ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಅಲ್ಲಲ್ಲಿ ಕಟ್ಟೆ ಪೂಜೆ ಮಾಡುವ ಯುವಜನತೆಗೆ ಅಪವಾದ ಎಂಬAತೆ ಶಮಂತ ಬದುಕಿದ್ದ. ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ವರ್ಷ ಬಿಕಾಂ ಪದವಿ ಪಡೆದಿದ್ದ ಶಮಂತ ಕಾಲೇಜಿನಲ್ಲಿ ಅತ್ಯಂತ ಸೌಮ್ಯ ಸ್ವಭಾವದ ವಿದ್ಯಾರ್ಥಿ ಎನಿಸಿದ್ದ.

ಪದವಿ ಪಡೆದ ನಂತರವೂ ಹಮ್ಮುತೋರದೆ ಪ್ರತಿದಿನ ಕೆ.ಎಂ.ರಸ್ತೆಯ ಹೋಟೆಲಿನಲ್ಲಿ ಮುಂಜಾನೆ ೪ ಗಂಟೆಯಿAದ ೭ ಗಂಟೆವರೆಗೆ ಅಡಿಗೆ ಕೆಲಸ ಮಾಡುತ್ತಿದ್ದ. ೮ ಗಂಟೆಯಿAದ ತನ್ನ ತಾಯಿಯ ಜೊತೆಗೆ ತೋಟದ ಕೆಲಸಗಾರರ ತಂಡವನ್ನು ಪಿಕ್ ಅಪ್ ಮೂಲಕ ಬೇರೆ ಬೇರೆ ತೋಟಗಳಿಗೆ ಕರೆದುಕೊಂಡು ಹೋಗಿ ಬಿಟ್ಟುಬರುತ್ತಿದ್ದ. ಆನಂತರ ಸಂಜೆ ಅವರನ್ನು ಮರಳಿ ಪಿಕ್ ಅಪ್ ಮೂಲಕ ಕಳಸಕ್ಕೆ ಕರೆದುಕೊಂಡು ಬರುತ್ತಿದ್ದ.
ಈ ನಡುವಿನ ಅವಧಿಯಲ್ಲಿ ತೋಟ, ಗದ್ದೆ ಕೆಲಸ, ಪಿಕ್ ಅಪ್ ಬಾಡಿಗೆ ಮಾಡುತ್ತಿದ್ದ. ದುಡಿಮೆಗೆ ಇದ್ದ ಯಾವ ಅವಕಾಶವನ್ನೂ ಬಿಡದ ಶಮಂತ ೨೨ನೇ ವಯಸ್ಸಿಗೆ ಈ ಪ್ರಪಂಚದ ದುಡಿಮೆಯ ಮಾರ್ಗಗಳೆಲ್ಲಕ್ಕೂ ಗುಡ್ ಬೈ ಹೇಳಿ ಹೊರಟೇಬಿಟ್ಟ.
ಕಳೆದ ಗುರುವಾರ ಮಧ್ಯಾಹ್ನ ತನ್ನ ಪಿಕ್ ಅಪ್ ವಾಹನ ಕೊಳಮಗೆಯಲ್ಲಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ನಂತರ ಶಮಂತ ಕಣ್ಮರೆ ಆಗಿದ್ದ. ಶಮಂತ ಕಣ್ಮರೆ ಆಗುತ್ತಿದ್ದಂತೆ ಅದೇ ದಿನ ಅವನ ತಾಯಿ ರವಿಕಲಾ ಕೂಡ ಆತ್ಮಹತ್ಯೆ ಮೂಲಕ ಶಮಂತನ ಹಾದಿ ಹಿಡಿದರು.

ತನ್ನ ಜೀವನದ ಕನಸುಗಳನ್ನೆಲ್ಲಾ ಶಮಂತನ ರೂಪದಲ್ಲೇ ಸಾಕಾರ ಮಾಡಿಕೊಳ್ಳುವ ಕಲ್ಪನೆ ಮಾಡಿಕೊಂಡಿದ್ದ ತಾಯಿ ರವಿಕಲಾ ಕೆರೆಗೆ ಹಾರಿ ಪ್ರಾಣ ಕಳೆದುಕೊಳ್ಳುವಷ್ಟು ಹತಾಶರಾಗಿದ್ದರು. ಆಟಿ ಅಮಾವಾಸ್ಯೆಯ ಮಧ್ಯಾಹ್ನ ಶಮಂತ ಭದ್ರೆಯ ಒಡಲು ಸೇರಿದರೆ ಅದೇ ರಾತ್ರಿ ತಾಯಿ ರವಿಕಲಾ ಕೆರೆಗೆ ಆಹಾರವಾದರು.
ತನ್ನ ಅಚ್ಚುಮೆಚ್ಚಿನ ಪಿಕ್ ಅಪ್ ವಾಹನ ನೀರಿನಲ್ಲಿ ಮುಳುಗಿದ್ದ ಸ್ಥಳದಿಂದ ೧೫೦ ಮೀಟರ್ ದೂರದಲ್ಲಿ ಶಮಂತನ ಶವ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ಪಿಕ್ ಅಪ್ ವಾಹನದಲ್ಲಿ ಶಮಂತ ಉಳಿತಾಯ ಮಾಡಿದ್ದ ೫೦೦ ರೂಪಾಯಿ ನೋಟಿನ ಕಟ್ಟು ಕೂಡ ಸಿಕ್ಕಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ದೋಣಿ ಬಳಸಿ ಶವವನ್ನು ಭದ್ರಾ ನದಿ ದಡಕ್ಕೆ ಎಳೆದುಕೊಂಡು ಬಂದಾಗ ಆತನ ಗೆಳೆಯರು ನದಿ ತೀರದಲ್ಲಿ ಕಣ್ಣೀರು ಹಾಕಿದರು. ಮರಣೋತ್ತರ ಪರೀಕ್ಷೆ ವೇಳೆಗೆ ಕಳಸ ಸರ್ಕಾರಿ ಆಸ್ಪತ್ರೆ ಬಳಿ ಜನರು ಮುಮ್ಮಲ ಮರುಗಿದರು.
ಶಮಂತನ ಶವ ಪತ್ತೆ ಮಾಡಲು ಬಂದಿದ್ದ ಅಗ್ನಿಶಾಮಕ ದಳದ ಜೊತೆಗೆ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್, ಬಣಕಲ್ ಆರೀಫ್ ನೇತೃತ್ವದ ಮೂಡಿಗೆರೆಯ ಸಾಮಾಜಿಕ ಸೇವಾ ಸಂಸ್ಥೆ, ಶೌರ್ಯ ವಿಪತ್ತು ಸಂಸ್ಥೆ ಕಾರ್ಯಕರ್ತರು ಕೂಡ ಯುವಕನ ಅಕಾಲಿಕ ಮರಣಕ್ಕೆ ಕಂಬನಿ ಮಿಡಿದರು.
ಭದ್ರೆಯ ಒಡಲಿನಲ್ಲಿ ಲೀನವಾದ ಶಮಂತನ ಸಾವು ನಮ್ಮನ್ನು ಇನ್ನಷ್ಟು ದಿನಗಳ ಕಾಲ ಕಾಡುವುದು ಖಚಿತ. ಜೊತೆಗೆ ಮಗನ ಜೀವನದ ಅಂತ್ಯದಲ್ಲಿ ತನ್ನ ಅಂತ್ಯ ಕೂಡ ಇದೆ ಎಂದು ಪ್ರಾಣ ಕಳೆದುಕೊಂಡ ರವಿಕಲಾ ಅವರನ್ನೂ ಕೂಡ ಸಂವೇದನಾಶೀಲರು ಅಷ್ಟು ಬೇಗನೇ ಮರೆಯಲಾರರು.
