ನಕಲಿ ಸೀಲು, ಲೆಟರ್ ಹೆಡ್ ಬಳಸಿ ಫೋರ್ಜರಿ: ಕಳಸ ಪಂಚಾಯಿತಿ ಆರೋಪ
ಕಳಸ:ಇಲ್ಲಿನ ಗ್ರಾಮ ಪಂಚಾಯಿತಿಯ ನಕಲಿ ಲೆಟರ್ ಹೆಡ್ ಮತ್ತು ಸೀಲು ಬಳಸಿ ಫೋರ್ಜರಿ ಮಾಡಲಾಗಿದೆ ಎಂದು ಕಳಸ ಗ್ರಾಮ ಪಂಚಾಯಿತಿಯು ಪ್ರಕಟಣೆ ಮತ್ತು ಸುದ್ದಿಗೋಷ್ಟಿಯಲ್ಲಿ ಗಂಭೀರ ಆರೋಪ ಮಾಡಿದೆ.
ಕಳಸ ಎಸ್ಟೇಟ್ ಹಂಗಾಮಿ ನಿವಾಸಿಯಾದ ಪ್ರಭಾವಿ ವ್ಯಕ್ತಿಯೊಬ್ಬರ ಹೆಸರಿಗೆ ಕಳಸ ಗ್ರಾಮ ಪಂಚಾಯಿತಿಯು ನೀಡಿರುವಂತೆ ಸೃಷ್ಟಿಸಿರುವ ವಾಸ ದೃಢೀಕರಣ ಪತ್ರ ನಕಲಿಯಾಗಿದೆ ಎಂದು ಕಳಸ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಈ ದೃಢೀಕರಣ ಪತ್ರಕ್ಕಾಗಿ ಕಳಸ ಪಂಚಾಯಿತಿಯ ನಕಲಿ ಲೆಟರ್ ಹೆಡ್ ಬಳಸಲಾಗಿದೆ. ಪತ್ರದಲ್ಲಿ ಇರುವ ಸಹಿ ಕೂಡ ನನ್ನದಲ್ಲ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ವಹಿಸಬೇಕು ಎಂದು ಕಳಸ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಕವೀಶ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಪಂಚಾಯಿತಿ ಸದಸ್ಯ ಸಂತೋಷ್ ಹಿನಾರಿ, ನಮ್ಮ ಪಂಚಾಯಿತಿಯ ನಕಲಿ ದಾಖಲೆ ಸೃಷ್ಟಿಸಿ ಅಡುಗೆ ಅನಿಲದ ಸಂಪರ್ಕ ಪಡೆಯಲಾಗಿದೆ. ಕಂದಾಯ ಇಲಾಖೆಯಲ್ಲಿ ವಾಸ ಸ್ಥಳದ ದೃಢೀಕರಣಕ್ಕಾಗಿ ಅರ್ಜಿ ಸಲ್ಲಿಸಿದಾಗ ಈ ವಿಚಾರ ಪತ್ತೆಯಾಗಿದೆ. ಕಳಸದಲ್ಲಿ ಕಂದಾಯ ಇಲಾಖೆಯ ಹೆಸರಲ್ಲಿ ಅನೇಕ ನಕಲಿ ದಾಖಲೆಗಳು ಸೃಷ್ಟಿಯಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತದ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕೋರಿದ್ದಾರೆ.
ಪಂಚಾಯಿತಿ ಸದಸ್ಯ ರಂಗನಾಥ್ ಮಾತನಾಡಿ, ಕಳಸದಲ್ಲಿ ಕ್ರಿಮಿನಲ್ ದಂಧೆಗಳು ಹೆಚ್ಚಾಗಿ ನಡೆಯುತ್ತಿದೆ. ಸರ್ಕಾರಿ ದಾಖಲೆಗಳನ್ನೇ ಫೋರ್ಜರಿ ಮಾಡುವ ಮಟ್ಟಿಗೆ ಅಕ್ರಮಗಳು ರಾಜಾರೋಷವಾಗಿ ನಡೆಯುತ್ತಿವೆ. ನಕಲಿ ದಾಖಲೆಗಳನ್ನು ಪಡೆದುಕೊಂಡವರ ಹಿನ್ನೆಲೆ ಬಗ್ಗೆ ಪೊಲೀಸರು ಕೂಲಂಕುಷ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
94ಸಿ ಅರ್ಜಿಯಲ್ಲಿ ಬಡವರಿಂದಲೂ 1-2 ಲಕ್ಷ ರೂಪಾಯಿ ಪಡೆದು ನಕಲಿ ಹಕ್ಕುಪತ್ರ ಕೊಡಿಸಲಾಗುತ್ತಿದೆ. ಈ ದಂಧೆಯನ್ನು ಕೂಡ ಜನರು ಗಮನಿಸಬೇಕು.ಫಾರಂ ನಂಬರ್ 53ರಲ್ಲೂ ನಕಲಿ ಸಾಗುವಳಿ ಚೀಟಿ ಕೊಡಲಾಗಿದೆ. ಈ ಬಗ್ಗೆಯೂ ಸೂಕ್ತ ತನಿಖೆ ಆಗಬೇಕಿದೆ ಎಂದು ಅವರು ಒತ್ತಾಯಿಸಿದರು.
ಪಂಚಾಯಿತಿ ಅಧ್ಯಕ್ಷೆ ಸುನಿತಾ ಕುಮಾರಿ, ಉಪಾಧ್ಯಕ್ಷ ಭಾಸ್ಕರ್, ಸದಸ್ಯರಾದ ಕಾರ್ತಿಕ ಶಾಸ್ತ್ರಿ ಸುದ್ದಿಗೋಷ್ಟಿಯಲ್ಲಿದ್ದರು.
