ಕೆಪಿಎಸ್ ಶಾಲೆಗೆ 10 ಕೋಟಿ ಅನುದಾನ:ಮಧು ಬಂಗಾರಪ್ಪ ಅವರಿಗೆ ಮನವಿ
ಕಳಸ:ಕಳಸ ಕೆಪಿಎಸ್ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ 10 ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ಶಾಲಾಭಿವೃದ್ಧಿ ಸಮಿತಿಯು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿತು.
ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮೊಹಮ್ಮದ್ ರಫೀಕ್ ನೇತೃತ್ವದಲ್ಲಿ ಸಚಿವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿತು.
ಸುಮಾರು 1000 ಮಕ್ಕಳು ಇರುವ ರಾಜ್ಯದ ಮಾದರಿ ಶಾಲೆಯಾಗಿರುವ ಕಳಸ ಕೆಪಿಎಸ್ ಶಾಲೆಗೆ ಇನ್ನಷ್ಟು ಕೊಠಡಿಗಳು, ಶೌಚಾಲಯಗಳು, ಪೀಠೋಕಣಗಳು, ತಾಂತ್ರಿಕ ಉಪಕರಣಗಳು, ಶಾಲಾ ಆವರಣ ಗೋಡೆ ಮತ್ತಿತರ ಮೂಲ ಸೌಕರ್ಯಕ್ಕಾಗಿ ವಿಶೇಷ ಅನುದಾನ ನೀಡಬೇಕು ಎಂದು ನಿಯೋಗ ಮನವಿ ಮಾಡಿತು.
ಸಚಿವ ಮಧು ಬಂಗಾರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿ, ನಿಮ್ಮ ಶಾಲೆಗೆ ಈ ಹಿಂದೆ ಬಂದಿದ್ದಾಗ ನೀಡಿದ್ದ ಭರವಸೆ ನೆನಪಿದೆ. ಅತಿ ಶೀಘ್ರದಲ್ಲೇ ವಿಶೇಷ ಅನುದಾನವನ್ನು ಕಳಸದ ಶಾಲೆಗೆ ಒದಗಿಸುವ ಭರವಸೆ ಕೊಟ್ಟರು. ನಿಯೋಗದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸುರೇಶ್, ಶಿಕ್ಷಕರಾದ ಶಿವಕುಮಾರ್, ಲೋಕೇಶ್, ಗಿರೀಶ್, ಸಮಿತಿ ಸದಸ್ಯ ವಸಂತ ಇದ್ದರು.
