ಹೆಚ್.ಆರ್.ಪಾಂಡುರಂಗ ಅವರಿಗೆ ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯತ್ವದ ಗೌರವ
ಕಳಸ:ಇಲ್ಲಿನ ಇತಿಹಾಸ ಸಂಶೋಧಕ ಹೆಚ್.ಆರ್.ಪಾಂಡುರಂಗ ಕರ್ನಾಟಕ ಇತಿಹಾಸ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎರಡನೇ ಬಾರಿಗೆ ಪುನರಾಯ್ಕೆ ಆಗಿದ್ದಾರೆ.
ಗದಗದಲ್ಲಿ ಇತ್ತೀಚೆಗೆ ನಡೆದ ಇತಿಹಾಸ ಅಕಾಡೆಮಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಇತಿಹಾಸ ತಜ್ಞ ಡಾ.ದೇವರಕೊಂಡಾ ರೆಡ್ಡಿ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಪ್ರತಿನಿಧಿಯಾಗಿ ಕಳಸದ ಹೆಚ್.ಆರ್.ಪಾಂಡುರಂಗ ಆಯ್ಕೆ ಆಗಿದ್ದಾರೆ.
ಪಾಂಡುರಂಗ ಅವರು ಜಿಲ್ಲೆಯ ನೂರಾರು ಶಾಸನಗಳು, ಮಾಸ್ತಿಕಲ್ಲು, ವೀರಗಲ್ಲಗಳ ಅಧ್ಯಯನ ಮಾಡಿದ್ದಾರೆ. ತನ್ಮೂಲಕ ಐತಿಹಾಸಿಕ ಸಂಗತಿಗಳಿಗೆ ಸೂಕ್ತ ಪುರಾವೆ ಒದಗಿಸಿದ್ದಾರೆ.
ಕಳಸ ತಾಲ್ಲೂಕಿನ ಬಹುತೇಕ ಎಲ್ಲ ಶಾಸನಗಳ ಅಧ್ಯಯನ ಮುಗಿಸಿದ್ದು ತಾಲ್ಲೂಕಿನ ಇತಿಹಾಸದ ಬಗ್ಗೆ ಕೃತಿ ರಚನೆ ಹಂತದಲ್ಲಿದೆ. ನಿವೃತ್ತಿ ನಂತರವೂ ಪಾಂಡುರಂಗ ಅಧ್ಯಯನ ಮುಂದುವರೆಸಿದ್ದು ಶಾಸನ ಶಾಸ್ತ್ರದ ಬಗ್ಗೆ ಎಂ.ಎ. ಪದವಿ ಅಭ್ಯಾಸ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಇರುವ ನಿರ್ಲಕ್ಷಿತ ಸ್ಮಾರಕಗಳನ್ನು ಜಿಲ್ಲಾಡಳಿತ ಮತ್ತು ಇತಿಹಾಸ ಅಕಾಡೆಮಿ ಸಹಕಾರದೊಂದಿಗೆ ಸಂರಕ್ಷಿಸುವ ಮತ್ತು ಬೆಳಕಿಗೆ ತರುವ ಎಲ್ಲ ಪ್ರಯತ್ನ ಮಾಡುವುದಾಗಿ ಪಾಂಡುರಂಗ ತಿಳಿಸಿದ್ದಾರೆ.
ಸ್ಥಳಿಯರ ನೆರವಿನೊಂದಿಗೆ ಹೊಯ್ಸಳರ ನಾಡಿನ ಪ್ರಾಮುಖ್ಯತೆಯನ್ನು ಇಡೀ ನಾಡಿಗೆ ತಿಳಿಸುವ ಕೆಲಸ ಮಾಡುತ್ತೇನೆ ಎಂದೂ ಅವರು ಹೇಳಿದ್ದಾರೆ.
