ಕಳಸ:ಕಳಸ-ಮಾಗುಂಡಿ ರಾಜ್ಯ ಹೆದ್ದಾರಿಯಲ್ಲಿ ಕಾಡುಕೋಣಗಳ ಹಿಂಡು ಕಂಡು ಕಂಗಾಲದ ಕಾರು ಚಾಲಕ ಮರಕ್ಕೆ ಢಿಕ್ಕಿ ಹೊಡೆದ ಘಟನೆ ಶನಿವಾರ ರಾತ್ರಿ ನಡೆದಿದೆ.
ರಾತ್ರಿ 10 ಗಂಟೆಗೆ ಕಳಸದಿಂದ ಗೊರಸುಕುಡಿಗೆಗೆ ಹೋಗುತ್ತಿದ್ದ ಕೃಷ್ಣಮೂರ್ತಿ ಅವರ ಮಗ ಶಾಮಕೀರ್ತನ್ ತಮ್ಮ ಮನೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಕಾಡುಕೋಣಗಳ ದೊಡ್ಡ ಹಿಂಡು ಕಂಡು ಭಯಗೊಂಡಿದ್ದಾರೆ. ರಸ್ತೆ ಪಕ್ಕದ ಮರಕ್ಕೆ ಅವರ ಕಾರು ಢಿಕ್ಕಿ ಹೊಡೆದಾಗ ಅವರ ತಾಯಿ ನಳಿನಿ ಅವರಿಗೆ ಗಾಯಗಳಾಗಿವೆ.

ಅವರಿಗೆ ಕಳಸದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಉಪ ವಲಯ ಅರಣ್ಯಾಧಿಕಾರಿ ಸುಂದರೇಶ್ ಗಾಯಾಳು ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ಪ್ರದೇಶದಲ್ಲಿ ಪ್ರತಿದಿನವೂ ಕಾಡುಕೋಣಗಳ ಹಿಂಡು ರಸ್ತೆಯಲ್ಲಿ ಮತ್ತು ಕೃಷಿ ಭೂಮಿಯಲ್ಲಿ ಇರುತ್ತವೆ. ಅವುಗಳನ್ನು ಕಾಡಿಗೆ ಓಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
