ಕಳಸ:ಕಳಸ ಸಮೀಪದ ಕುಕ್ಕೋಡು ಪ್ರದೇಶದಲ್ಲಿ ಭಾನವಾರ ಸಂಜೆ ಸಂಪೂರ್ಣವಾಗಿ ಸುಟ್ಟು ಹೋದ ಮನೆಯ ಮುಂದೆ ಕಂಗಾಲಾಗಿ ಕುಳಿತಿದ್ದ ಕಾರ್ಮಿಕ ಮಹಿಳೆ ಶಶಿಕಲಾ ಮುಖದಲ್ಲಿ ಆಕಾಶವೇ ಮೈಮೇಲೆ ಬಿದ್ದಂತಹ ಭಾವ ತುಂಬಿತ್ತು.
ವರ್ಷಗಳ ಕಾಲ ಹೋಟೆಲಿನಲ್ಲಿ ಬೆವರು ಹರಿಸಿ ಕಟ್ಟಿಕೊಂಡಿದ್ದ ಸೂರು ಕೂಡ ಒಂದೇ ಗಂಟೆಯಲ್ಲಿ ಇಲ್ಲವಾಗಿತ್ತು. ಕುಕ್ಕೋಡು ಪ್ರದೇಶದಲ್ಲಿ ತಾತ್ಕಾಲಿಕ ಮನೆ ನಿರ್ಮಿಸಿಕೊಂಡಿದ್ದ ಶಶಿಕಲಾ ಕಳಸದ ಹೋಟೆಲ್ನಲ್ಲಿ ಕೆಲಸ ಮಾಡುವವರು. ಅವರು ಎಂದಿನಂತೆ ಭಾನುವಾರವೂ ಕಳಸದಲ್ಲಿ ಕೆಲಸ ಮಾಡುತ್ತಿದ್ದರು.
ಸಂಜೆ 4.30ರ ವೇಳೆಗೆ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಆಸುಪಾಸಿನವರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಕಳಸ ಪೊಲೀಸರು ಕೂಡ ಸ್ಥಳಕ್ಕೆ ತೆರಳಿ ಸಾಕಷ್ಟು ಪ್ರಯತ್ನ ಮಾಡಿದರು.ಆದರೆ ಬೆಂಕಿ ಇಡೀ ಮನೆಗೆ ಆವರಿಸಿಕೊಂಡು ಮನೆಯಲ್ಲಿದ್ದ ಅಕ್ಕಿ, ಪಾತ್ರೆ, ಬಟ್ಟೆ ಬರೆ ಮತ್ತು 10 ಸಾವಿರ ನಗದು, ಆಧಾರ್ ಕಾರ್ಡ್, ರೇಶನ್ ಕಾರ್ಡ್ ಸುಟ್ಟು ಹೋಗಿದೆ.

ಮನೆ ಸಂಪೂರ್ಣ ಸುಟ್ಟು ಹೋದ ಹಿನ್ನೆಲೆಯಲ್ಲಿ ಒಂಟಿ ಮಹಿಳೆ ಶಶಿಕಲಾ ಕಂಗಾಲಾಗಿದ್ದಾರೆ. ಅವರ ಒಬ್ಬನೇ ಮಗ ವಸತಿ ಶಾಲೆಯಲ್ಲಿ ಓದುತ್ತಿದ್ದಾನೆ.ಅವರ ಮನೆ ಆಸುಪಾಸಿನಲ್ಲಿ ಇಂತಹುದೇ ಅನೇಕ ಮನೆಗಳು ಇದ್ದು ಬೆಂಕಿ ಆ ಮನೆಗಳಿಗೆ ಆವರಿಸದೆ ಇದ್ದುದರಿಂದ ದೊಡ್ಡ ಅಪಾಯ ತಪ್ಪಿದೆ.
ಮನೆ ಕಳೆದುಕೊಂಡು ಕಂಗಾಲಾಗಿದ್ದ ಶಶಿಕಲಾ ಅವರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿಕೊಡಲು ಗ್ರಾಮಸ್ಥರು ಹಣ ಸಂಗ್ರಹ ಮಾಡಿದರು. ಕಂದಾಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಶಶಿಕಲಾ ಅವರಿಗೆ ಸೂಕ್ತ ಪರಿಹಾರ ಸಿಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
