ಕಳಸ:ಕಳಸ ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿಯ ಭೂಮಿ ವಶಪಡಿಸಿಕೊಂಡು ಎರಡೂ ತಾಲ್ಲೂಕುಗಳ ಸಾವಿರಾರು ನಿವೇಶನರಹಿತರು ಮತ್ತು ಭೂರಹಿತರಿಗೆ ಹಂಚಬೇಕು ಎಂದು ಭೂಹೀನ ಬಡವರ ಐಕ್ಯತಾ ಒಕ್ಕೂಟ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದೆ.
ಎರಡೂ ತಾಲ್ಲೂಕುಗಳ ಅಕ್ರಮ ಭೂ ಮಂಜೂರಾತಿ ಬಗ್ಗೆ ಈಗಾಲೇ ಕಂದಾಯ ಇಲಾಖೆ, ಲೋಕಾಯುಕ್ತ, ಭೂ ಕಬಳಿಕೆ ನ್ಯಾಯಾಲಯ ಮತ್ತು ಉಚ್ಛನ್ಯಾಯಾಲಯದಲ್ಲಿ ತನಿಖೆ ನಡೆಯತ್ತಿದೆ.ರಾಜ್ಯ ಸರ್ಕಾರ ನೇಮಿಸಿದ್ದ ತನಿಖಾ ತಂಡವೂ ಈಗಗಾಲೇ ವರದಿ ಸಲ್ಲಿಸಿದೆ. 10,785 ಎಕರೆ ಅಕ್ರಮ ಭೂ ಮಂಜೂರಾತಿ ನಡೆದಿದೆ ಎಂದು ತನಿಖಾ ತಂಡ ಕೂಡ ಪತ್ತೆ ಹಚ್ಚಿದೆ ಎಂದು ಒಕ್ಕೂಟ ಬೊಟ್ಟು ಮಾಡಿದೆ.
ಈ ಭೂಮಿಯನ್ನು ಎರಡೂ ತಾಲ್ಲೂಕುಗಳ 30 ಸಾವಿರಕ್ಕೂ ಹೆಚ್ಚು ನಿವೇಶನರಹಿತರಿಗೆ ಮತ್ತು ಭೂರಹಿತರಿಗೆ ಹಂಚಬೇಕು. ಜೊತೆಗೆ ಸಮುದಾಯದ ಬಳಕೆಯ ಸ್ಮಶಾನ, ಶಾಲೆ, ಸಮುದಾಯ ಭವನ, ವಸತಿಗೃಹ, ಸರ್ಕಾರಿ ಕಚೇರಿ ಮತ್ತಿತರ ಉದ್ದೇಶಗಳಿಗೆ ಬಳಸಿಕೊಳ್ಳಬೇಕು ಎಂದು ಈ ಬಗ್ಗೆ ಹೋರಾಟ ಸಂಘಟಿಸಿರುವ ಸಿಪಿಐ ಮುಖಂಡ ಕೆಳಗೂರು ರಮೇಶ್ ಆಗ್ರಹಿಸಿದ್ದಾರೆ.
ಅಕ್ರಮ ಭೂ ಮಂಜೂರಾತಿಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದಿರುವ ಒಕ್ಕೂಟ, ಹೊರದೇಶ ಮತ್ತು ಹೊರರಾಜ್ಯದಲ್ಲಿ ನೆಲೆಸಿರುವವರಿಗೂ ಭೂಮಿ ಮಂಜೂರಾಗಿದೆ.ವಸತಿರಹಿತರಿಗೆ ಮೀಸಲಿಟ್ಟಿದ್ದ ಭೂಮಿ ಮತ್ತು ಪರಿಶಿಷ್ಟ ಜಾತಿಯವರಿಗೆ ಮಂಜುರಾಗಿದ್ದ ದರಖಾಸ್ತು ಭೂಮಿಯನ್ನೂ ಅಕ್ರಮವಾಗಿ ಮಂಜೂರು ಮಾಡಲಾಗಿದೆ.18 ವರ್ಷಕ್ಕಿಂತ ಚಿಕ್ಕವರಿಗೆ ಭೂ ಮಂಜುರಾತಿ ಮಾಡಿರುವುದು, ಅರ್ಜಿ ಸಲ್ಲಿಸದೇ ಇದ್ದವರಿಗೂ ಮಂಜೂರಾತಿ ಮಾಡಿರುವುದು, ನೂರಾರು ಎಕರೆ ಭೂಮಿ ಇದ್ದರೂ ಬೇನಾಮಿ ಹೆಸರಲ್ಲಿ ಮಂಜೂರು ಮಾಡಿಸಿಕೊಂಡಿರುವುದು ಮುಂತಾದ ಪ್ರಕರಣ ಇದೆ. ಆದ್ದರಿಂದ ಅಕ್ರಮ ಭೂ ಮಂಜೂರಾತಿಯ ಕಡತಗಳನ್ನು ಜಿಲ್ಲಾಧಿಕಾರಿ ಸಂಪೂರ್ಣ ವಜಾಗೊಳಿಸಬೇಕು ಎಂದೂ ಒಕ್ಕೂಟ ಒತ್ತಾಯಿಸಿದೆ.
ಒಕ್ಕೂಟದ ಮುಖಂಡರಾದ ಶಿವಪ್ರಸಾದ್ ಭಾರತಿಬೈಲು, ಕೃಷ್ಣಪ್ಪ ಬಿಳಗುಳ, ಜಗದೀಶ್ ಚಕ್ರವರ್ತಿ, ಸಂತೋಷ್ ಕಮ್ಮರಗೋಡು, ಹರೀಶ್ ಕೆಲ್ಲೂರು, ರಾಜೇಶ್ ಕಮ್ಮರಗೋಡು, ಉಮೇಶ್ ಘಟ್ಟದಹಳ್ಳಿ ಚಂದ್ರು ದೇವರಮಕ್ಕಿ, ಶೇಖರ್ ಹೊಸಳ್ಳಿ ಮತ್ತಿತರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕಳಸ ಮತ್ತು ಮೂಡಿಗೆರೆ ತಾಲ್ಲೂಕಿನ ಅಕ್ರಮ ಭೂ ಮಂಜುರಾತಿ ಕಡತಗಳನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಭೂ ಹೀನ ಬಡವರ ಐಕ್ಯತಾ ಒಕ್ಕೂಟ ಶಿರಸ್ತೇದಾರ ಬಾಬು ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
