ಕಳಸ:ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಸರಾದ ಹೊರನಾಡಿನಲ್ಲಿ ಪರಿಸರ ಪ್ರವಾಸೋದ್ಯಮವನ್ನು ಕೂಡ ವಿಸ್ತರಿಸುವ ಪ್ರಯತ್ನ ಆರಂಭವಾಗಿದೆ.
ಕಳಸ ತಾಲ್ಲೂಕಿನಲ್ಲಿ ಚಾರಣಕ್ಕೆ ಲಭ್ಯವಿರುವ ತಾಣಗಳ ಪಟ್ಟಿಗೆ ಸೋಮವಾರ ಕರ್ಸಿ ಗುಡ್ಡ ಸೇರ್ಪಡೆ ಆಗಿದೆ. ಹೊರನಾಡು ಗ್ರಾಮದ ಮಾವಿನಹೊಲ ಸಮೀಪದ ಕರ್ಸಿ ಗುಡ್ಡದಲ್ಲಿ ಅರಣ್ಯ ಇಲಾಖೆ ಚಾರಣಕ್ಕೆ ಚಾಲನೆ ನೀಡಲಾಗಿದೆ.
ಸಮುದ್ರ ಮಟ್ಟದಿಂದ 4000 ಅಡಿ ಎತ್ತರದ ಈ ಬೆಟ್ಟದ ತುದಿಗೆ ತಲುಪಲು 3 ಕಿ.ಮೀ ಚಾರಣ ಮಾಡಬೇಕಿದೆ. ಮಾವಿನಹೊಲ ಪ್ರದೇಶದಿಂದ ಚಾರಣಿಗರು ಹುಲ್ಲುಗಾವಲು, ನಿತ್ಯಹರಿದ್ವರ್ಣ ಕಾಡಿನ ಮೂಲಕ ನಡೆದು ಸಾಗಿ ಈ ಗುಡ್ಡ ತಲುಪಬಹುದು. ಕರ್ಸಿ ಗುಡ್ಡದ ತುತ್ತತುದಿಯಿಂದ ಕಳಸ ಮತ್ತು ಕೊಪ್ಪ ತಾಲ್ಲೂಕಿನ ನಯನಮನೋಹರ ಬೆಟ್ಟದ ಸಾಲುಗಳು, ಕಾಫಿ ತೋಟಗಳ ನೋಟ ಕಾಣುತ್ತವೆ. ಕಣಿವೆಗಳು, ಶೋಲಾ ಕಾಡು ಮತ್ತು ಹಚ್ಚಹಸಿರಿನ ಹುಲ್ಲಗಾವಲುಗಳ ದರ್ಶನ ಇಲ್ಲಿಂದ ಲಭ್ಯವಾಗುತ್ತದೆ.
ಸೋಮವಾರ ಚಾರಣದ ಆರಂಭದ ಸ್ಥಳಕ್ಕೆ ತೆರಳಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ, ಕರ್ಸಿ ಗುಡ್ಡ ಚಾರಣದ ನಾಮಫಲಕ ಅನಾವರಣ ಮಾಡಿದರು.ಶಾಸಕಿ ನಯನಾ ಮೋಟಮ್ಮ ಅವರ ಆಸಕ್ತಿ ಮತ್ತು ಅಧಿಕಾರಿಗಳ ಸಹಕಾರದಿಂದಾಗಿ ಹೊಸ ಪ್ರವಾಸಿ ತಾಣಗಳ ಶೋಧ ನಡೆಯುತ್ತಿದೆ. ಮಲೆನಾಡಿನಲ್ಲಿ ಹವಾಮಾನ ವೈಪರೀತ್ಯದಿಂದ ಕೃಷಿಕರು ಕಂಗಾಲಾಗಿರುವ ಈ ಸಂದರ್ಭದಲ್ಲಿ ಪ್ರವಾಸೋದ್ಯಮದಿಂದ ಹೊಸ ಆರ್ಥಿಕತೆಗೆ ಅವಕಾಶ ಆಗಿದೆ ಎಂದರು.

ಪ್ರವಾಸೋದ್ಯಮಿ ಚಂದ್ರಮೋಹನ್ ಮಾತನಾಡಿ, ಮಾರ್ಗದರ್ಶಿಗಳ ರೂಪದಲ್ಲಿ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಿದೆ. ಪರಿಸರ ನಾಶ ಆಗದಂತೆ ಪ್ರವಾಸೋದ್ಯಮ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಮುಖಂಡ ವಿಶ್ವನಾಥ್ ಮರಸಣಿಗೆ ಮಾತನಾಡಿ, ಕಳಸದ ಪ್ರವಾಸೋದ್ಯಮದ ನಕ್ಷೆಗೆ ಕರ್ಸಿ ಗುಡ್ಡ ಹೆಮ್ಮೆಯ ಸೇರ್ಪಡೆ. ಸ್ಥಳೀಯ ಆರ್ಥಿಕತೆಗೆ ಇದು ಇನ್ನಷ್ಟು ಕೊಡುಗೆ ಕೊಡುತ್ತದೆ ಎಂದರು. ಮುಖಂಡರಾದ ದಿನೇಶ್, ಮಹೇಶ್, ಚಂದ್ರು, ಕಿರಣ್, ವೀರೇಂದ್ರ ಭಾಗವಹಿಸಿದ್ದರು.
ಕರ್ಸಿ ಗುಡ್ಡ ಚಾರಣಕ್ಕೆ ಪ್ರತಿಯೊಬ್ಬರಿಗೆ 300 ರೂಪಾಯಿ ನಿಗದಿಪಡಿಸಲಾಗಿದ್ದು 10 ಜನರಿಗೆ ಒಬ್ಬ ಮಾರ್ಗದರ್ಶಿ ಕಡ್ಡಾಯವಾಗಿರುತ್ತದೆ. ಮಾರ್ಗದರ್ಶಿಗೆ 1000 ರೂಪಾಯಿ ಶುಲ್ಕ ತೆರಬೇಕಾಗಿದೆ. ಆಸಕ್ತರು ಅರಣ್ಯ ವಿಹಾರ ವೆಬ್ಸೈಟ್ ಮೂಲಕ ಈ ಚಾರಣಕ್ಕೆ ಟಿಕೆಟ್ ಖರೀದಿಸಬಹುದಾಗಿದೆ.
