ಕಳಸ: ರೇಬೀಸ್ ಖಾಯಿಲೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕಾಣಸಿಗುವಂತಹದ್ದು. ಜಗತ್ತಿನಲ್ಲಿ ಸುಮಾರು 60,000 ಜನ ಇದರಿಂದ ಬಳಲುತ್ತಿದ್ದು, ಭಾರತದಲ್ಲಿ 20,000 ಪ್ರಕರಣಗಳು ಕಂಡುಬರುತ್ತವೆ ಮತ್ತು ಅದರಲ್ಲಿನ ಶೇ.40ರಷ್ಟು ಮಕ್ಕಳನ್ನೊಳಗೊಂಡ ಪ್ರಕರಣಗಳಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ರೇಬೀಸ್ ರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಚಿಕ್ಕಮಗಳೂರಿನ ಉಪನಿರ್ದೇಶಕ ಡಾ. ಗುರುಶಾಂತಪ್ಪ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ -1 ಮತ್ತು ಘಟಕ -2 ಹಾಗೂ ಐ ಕ್ಯೂ ಎಸ್ ಸಿ ಸಹಯೋಗದಲ್ಲಿ ಶುಕ್ರವಾರ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೇಬೀಸ್ ರೋಗದ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಅವರು, ರೇಬೀಸ್ ಎಂಬುವಂತಹದ್ದು ಲೈಸಾ ವೈರಾಣುವಿನಿಂದ ಬರುವ ರೋಗವಾಗಿದ್ದು, ನಾಯಿ,ಬೆಕ್ಕು, ಮುಂಗುಸಿ, ಬಾವಲಿ ಸೇರಿದಂತೆ ಪ್ರಾಣಿಗಳಿಂದ ಹರಡುವ ರೋಗ. ಪ್ರಾಣಿಗಳು ಕಚ್ಚಿದ ಸ್ಥಳದಿಂದ ದೇಹದ ವಿವಿಧ ಭಾಗಗಳ ಮೂಲಕ ವೈರಸ್ ಸಂಚರಿಸಿ ಮೆದುಳನ್ನು ತಲುಪುತ್ತದೆ. ಈ ಖಾಯಿಲೆಯ ನಿಯಂತ್ರಣಕ್ಕೆ ವಿಶ್ವಸಂಸ್ಥೆ ಸಹಯೋಗದಲ್ಲಿ ಒನ್ ಹೆಲ್ತ್ ಅಭಿಯಾನ ಆರಂಭಿಸಿದ್ದು, 2030ರವರೆಗೆ ಭಾರತವನ್ನು ರೇಬೀಸ್ ಮುಕ್ತಗೊಳಿಸುವ ಗುರಿ ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ, ಮೈಸೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ, ಜಂಟಿ ನಿರ್ದೇಶಕ ಡಾ.ಶ್ರೀಧರ್ ಮೂರ್ತಿ ಮಾತನಾಡಿ, ನಮ್ಮ ನೆರೆಯ ಭೂತಾನ್ ದೇಶವು ಇತ್ತೀಚೆಗೆ ರೇಬೀಸ್ ಮುಕ್ತ ರಾಷ್ಟ್ರವಾಗಿದ್ದು, ಭಾರತವನ್ನು ಕೂಡ ರೇಬೀಸ್ ಮುಕ್ತ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾಕು ಪ್ರಾಣಿಗಳಿಗೆ ಉಚಿತ ಲಸಿಕೆ ಅಭಿಯಾನ ಆರಂಭಿಸಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ವಿಶುಕುಮಾರ್. ಎನ್ ಮಾತನಾಡಿ, ಪ್ರಾಣಿಗಳನ್ನು ಸಾಕುವುದು ತಪ್ಪಲ್ಲ, ಆದರೆ ಆ ಪ್ರಾಣಿಗಳಿಂದಾಗಬಲ್ಲ ಹಾನಿಯ ಬಗ್ಗೆ ಮುಂಜಾಗ್ರತೆ ವಹಿಸುವುದು ಸೂಕ್ತ. ಆದ್ದರಿಂದ ವಿದ್ಯಾರ್ಥಿಗಳು ಆದಷ್ಟು ಪ್ರಾಣಿಗಳ ಜೊತೆಗೆ ಜಾಗರೂಕರಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ರೇಬೀಸ್ ಖಾಯಿಲೆ ಜಾಗೃತಿಗಾಗಿ ವಿಶೇಷ ಪೋಸ್ಟರ್ ಬಿಡುಗಡೆ ಮತ್ತು ರೇಬೀಸ್ ಖಾಯಿಲೆ ಕುರಿತು ಕಿರು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಮೂಡಿಗೆರೆ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ವಿನಂತ್.ಪಿ.ಎಸ್, ಪಶುವೈದ್ಯಾಧಿಕಾರಿಗಳಾದ ಡಾ. ಸಚಿನ್, ಡಾ.ಸವಿತಾ ಕೋಟಿ, ಡಾ. ಮನು, ಎನ್.ಎಸ್.ಎಸ್ ಘಟಕ-1ರ ಕಾರ್ಯಕ್ರಮಾಧಿಕಾರಿ ಪುನೀತ್ ಕುಮಾರ್ ಕೆ.ಆರ್, ಉದ್ಯೋಗ ಕೋಶ ಘಟಕದ ಸಂಚಾಲಕರಾದ ಡಾ. ದಿನೇಶ್ ಟಿ.ಎಂ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
