ಕಳಸ:ಪಶ್ಚಿಮ ಘಟ್ಟದ ಜನರ ನಿದ್ದೆಗೆಡಿಸಿರುವ ಕಸ್ತೂರಿ ರಂಗನ್ ವರದಿ ಅನುಷ್ಟಾನದ ವಿರುದ್ಧ ಜನಾಂದೋಲನ ರೂಪಿಸುವ ಜೊತೆಗೆ ಕಾನೂನಿನ ಹೋರಾಟಕ್ಕೂ ಸಜ್ಜಾಗಬೇಕು ಎಂದು ಪಟ್ಟಣದಲ್ಲಿ ಭಾನುವಾರ ನಡೆದ ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಸಹಕಾರಿ ಧುರೀಣ ಮಂಜಪ್ಪಯ್ಯ, ಮಲೆನಾಡಿನ ಜನರು ಸತತವಾಗಿ ಅನಿಶ್ಚಿತತೆಯಲ್ಲೇ ಬದುಕಿದ್ದಾರೆ. ಭದ್ರಾ ಮೇಲ್ದಂಡೆ, ಮೀಸಲು ಅರಣ್ಯ, ಇನಾಂ ಭೂಮಿ ಮತ್ತಿತರ ಸಮಸ್ಯೆ ನಂತರ ಇದೀಗ ಕಸ್ತೂರಿರಂಗನ್ ವರದಿ ಜನರ ಬದುಕು ಕಸಿಯುತ್ತಿದೆ. ಬದುಕುವ ಹಕ್ಕನ್ನು ಸಂವಿಧಾನ ನಮಗೆ ನಿಡಿದ್ದು ಆ ಆಧಾರದ ಮೇಲೆ ವರದಿ ವಿರುದ್ಧ ನ್ಯಾಯಾಲಯದಲ್ಲೂ ಜಯ ಸಿಗುತ್ತದೆ ಎಂದರು.
ಹೊರನಾಡಿನ ಜಿ.ರಾಮನಾರಾಯಣ ಜೋಷಿ ಮಾತನಾಡಿ, ಈ ಹಿಂದೆ ಭದ್ರಾ ಮೇಲ್ದಂಡೆ ಹೋರಾಟದ ಸಂದರ್ಭದಲ್ಲಿ ಮಾಡಿದಂತೆ ಕಸ್ತೂರಿರಂಗನ್ ವರದಿಯ ಬಾಧಿತ ಪ್ರದೇಶದ ಎಲ್ಲರನ್ನೂ ಒಗ್ಗೂಡಿಸಿ ಹೋರಾಟ ರೂಪಿಸಬೇಕಿದೆ. ಪ್ರಭಾವಿ ಮಠಾಧೀಶರು, ಮುಖಂಡರನ್ನು ಮನ ಒಲಿಸಿ ದೆಹಲಿಗೆ ಕರೆದೊಯ್ದು ಸಂಬಂಧಪಟ್ಟವರಿಗೆ ವರದಿ ಅನುಷ್ಟಾನದ ಕರಾಳತೆಯನ್ನು ಪರಿಚಯಿಸಬೇಕಿದೆ. ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಆಗದಿದ್ದರೆ ಸ್ಥಳೀಯರ ಜೀವನಕ್ಕೆ ಅನುಕೂಲ ಆಗುವಂತಹ ಮಾರ್ಪಾಡುಗಳನ್ನು ಮಾಡಲು ಒತ್ತಡ ಹೇರಬೇಕಿದೆ ಎಂದರು.
ಸುಪ್ರೀಂಕೋರ್ಟಿನಲ್ಲೂ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ಮಾಡಬಹುದಾಗಿದೆ ಎಂದೂ ರಾಮನಾರಾಯಣ ಜೋಯಿಸ್ ಸಲಹೆ ನೀಡಿದರು.

ಕೆಪಿಸಿಸಿ ಸದಸ್ಯ ಪ್ರಭಾಕರ್ ಮಾತನಾಡಿ, ಈ ಹಿಂದೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು.ಈಗ ಮತ್ತೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕಸ್ತೂರಿರಂಗನ್ ವರದಿ ಅನುಷ್ಟಾನ ಮಾಡುವ ಪ್ರಯತ್ನ ನಡೆದಿದೆ.ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಸಂಸದರು ಕೂಡ ಈಗ ವಿಶೇಷ ಪ್ರಯತ್ನ ನಡೆಸಬೇಕು. ನಾವೆಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡಬೇಕು ಎಂದರು.
ಕಸ್ತೂರಿರಂಗನ್ ವರದಿ ಅನುಷ್ಟಾನಕ್ಕೆ ಸ್ಥಳೀಯವಾಗಿ ಕೂಡಲೇ ಎಲ್ಲ ಕೃಷಿಕರು ಕೂಡ ಆಕ್ಷೇಪಣೆ ಸಲ್ಲಿಸುವುದು, ಗ್ರಾಮ ಮಟ್ಟದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ತಕ್ಷಣದ ಅಗತ್ಯ ಎಂದು ಸಭೆ ತೀರ್ಮಾನಿಸಿತು.
ವರದಿ ವಿರುದ್ಧ ಕೇಂದ್ರ ಸಮಿತಿ ರಚಿಸುವ ಬಗ್ಗೆ ಬಾಧಿತ ಪ್ರದೇಶದ ಎಲ್ಲ ಮುಖಂಡರ ಜೊತೆ ಸಂಪರ್ಕ ಸಾಧಿಸುವುದು, ಜನಪ್ರತಿನಿಧಿಗಳಿಗೆ ವಿಷಯದ ಗಂಭೀರತೆ ತಿಳಿಸುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಖಂಡರಾದ ಜ್ವಾಲನಯ್ಯ, ಕೆ.ಆರ್.ಭಾಸ್ಕರ್, ಶ್ರೀಕಾಂತ್, ವೃಷಭರಾಜ್, ಸುಂದರ ಶೆಟ್ಟಿ, ಭೋಜೇಗೌಡ, ಮಾಧವ ಗೌಡ, ಸತೀಶ್, ಚಂದ್ರಶೇಖರ್, ವೆಂಕಟಗುರುನಾಥ ಮತ್ತಿತರರು ಭಾಗವಹಿಸಿದ್ದರು.
