ಕಳಸ:ಬಾಳೆಹೊಳೆ ಗ್ರಾಮದಲ್ಲಿ ಜಾನುವಾರುಗಳನ್ನು ಹತ್ಯೆ ಮಾಡಿ ಮಾಂಸ ಮಾಡಿರುವ ಘಟನೆ ಪತ್ತೆಯಾಗಿದೆ.
ಅಲ್ಲಿನ ಮೀನು ಮಾರುಕಟ್ಟೆ ಸಮೀಪದ ಸಿಂಧುವಳ್ಳಿ ಹಳ್ಳದ ಪಕ್ಕ ದನದ ಮಾಂಸ, ಮೂಳೆಗಳು, ಕಾಲು, ಕೊಂಬು ಹಾಗೂ ಚರ್ಮ ಪತ್ತೆ ಆಗಿದೆ. ಕಳಕೋಡು ಗ್ರಾಮದ ಮಂಜುನಾಥ ಎಂಬುವರು ಬಾಳೆಹೊಳೆ ಕಡೆಗೆ ಹೋಗುತ್ತಿದ್ದಾಗ ಸಿಂಧುವಳ್ಳಿ ಹಳ್ಳದ ಬಳಿ ಕೆಲವರು ನಿಂತಿರುವುದನ್ನು ಗಮನಿಸಿದ್ದಾರೆ. ಸ್ಥಳಕ್ಕೆ ತೆರಳಿ ನೋಡಿದಾಗ ದನದ ಮಾಂಸ, ಮೂಳೆಗಳು ಚೀಲದಲ್ಲಿ ಪತ್ತೆಯಾಗಿದೆ. ಅವರು ಕಳಸ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ಹಿಂದಿನ ದಿನ ರಾತ್ರಿ 8ರ ವೇಳೆಗೆ ಅಪರಿಚಿತನೊಬ್ಬ ಹಳ್ಳದ ಬದಿ ಓಡಾಡುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ಕಳಸ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
