ಕಳಸ:ಕಲ್ಲುಗೋಡು ತೂಗುಸೇತುವೆ ದುರಸ್ತಿ ಆಗುವವರೆಗೂ ಪ್ರವಾಸಿಗರು ತಮ್ಮ ಗ್ರಾಮಕ್ಕೆ ಬರಬಾರದು ಎಂದು ಕಲ್ಲುಗೋಡು ಗ್ರಾಮಸ್ಥರು ಪಣ ತೊಟ್ಟಿದ್ದಾರೆ. ತೂಗುಸೇತುವೆ ಶಿಥಿಲವಾಗಿದ್ದು ಪ್ರವಾಸಿಗರಿಂದ ಮತ್ತಷ್ಟು ಹಾಳಾಗುತ್ತಿದೆ ಎಂದು ಆರೋಪಿಸಿ ಕಲ್ಲುಗೋಡು ಪ್ರದೇಶದ ಗ್ರಾಮಸ್ಥರು ಭಾನುವಾರ ಪ್ರವಾಸಿಗರನ್ನು ತಡೆದರು.
ಹೊರನಾಡು ರಸ್ತೆಯಿಂದ ಅಂಬಾತೀರ್ಥ ಮತ್ತು ಕಲ್ಲುಗೋಡು ತೂಗುಸೇತುವೆ ತಲುಪುವ ರಸ್ತೆಯ ಆರಂಭದಲ್ಲೇ ಮಹಿಳೆಯರು ಮತ್ತು ಮಕ್ಕಳ ಜೊತೆಗೆ ಗ್ರಾಮಸ್ಥರು ಬಂದು ಪ್ರವಾಸಿಗರನ್ನು ತಡೆದರು. ಸತತ ಮೂರನೇ ಭಾನುವಾರ ಇಲ್ಲಿ ಪ್ರವಾಸಿಗರನ್ನು ತಡೆದು ತೂಗುಸೇತುವೆಗೆ ಹೋಗದಂತೆ ಮಾಡುವಲ್ಲಿ ಗ್ರಾಮಸ್ಥರು ಯಶಸ್ವಿಯಾದರು.

ಕಳಸ, ಹೊರನಾಡು, ಕುದುರೆಮುಖಕ್ಕೆ ಭೇಟಿ ನೀಡುವ ಪ್ರವಾಸಿಗರು ಕಲ್ಲುಗೋಡಿನ ತೂಗುಸೇತುವೆಗೂ ಭೇಟಿ ಕೊಡುತ್ತಾರೆ. ತೂಗುಸೇತುವೆಯ ಮೇಲೆ 50-100 ಜನರು ಏಕಕಾಲಕ್ಕೆ ಹೋಗುತ್ತಾರೆ. ಇದರಿಂದ ತೂಗುಸೇತುವೆಗೆ ಹಾನಿ ಆಗುತ್ತದೆ. ತೂಗುಸೇತುವೆ ಕುಸಿದು ಬಿದ್ದರೆ ಹತ್ತಾರು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಜೊತೆಗೆ ನಮ್ಮ ಊರಿಗೆ ಸಂಪರ್ಕ ಸೇತುವೆಯೂ ಇಲ್ಲವಾಗುತ್ತದೆ ಎಂದು ಕಲ್ಲುಗೋಡಿನ ಕಾಲೋನಿಯ ಯುವಕ ಗಿರೀಶ್ ಅಸಮಾಧಾನದಿಂದ ಹೇಳುತ್ತಾರೆ.
15 ವರ್ಷದ ಹಿಂದೆ ನಮ್ಮ ಊರಿಗೆ ಮಾಡಿದ ತೂಗುಸೇತುವೆಗೆ ಆಗಿನಿಂದ ಯಾವ ನಿರ್ವಹಣೆಯನ್ನೂ ಮಾಡಿಲ್ಲ. ಬಣ್ಣ ಕೂಡ ಬಳಿಯದೆ ಕಬ್ಬಿಣವೆಲ್ಲ ತಕ್ಕು ಹಿಡಿದಿದೆ. ಎರಡೂ ಬದಿ ಇರುವ ಜಾಲರಿ ಹರಿದು ಹೋಗುತ್ತಿದೆ. ಈ ತೂಗುಸೇತುವೆ ದುರಸ್ತಿಗೆ ಯಾರು ಅನುದಾನ ಕೊಡಬೇಕು ಎಂದು ಇಲಾಖೆಗಳ ಮಟ್ಟದಲ್ಲೇ ಗೊಂದಲ ಇದೆ. ತೂಗುಸೇತುವೆ ದುರಸ್ತಿ ಮಾಡುವವರೆಗೂ ಸ್ಥಳೀಯರು ಅಲ್ಲದೆ ಯಾರನ್ನೂ ಸೇತುವೆ ದಾಟಲು ಬಿಡುವುದಿಲ್ಲ ಎಂದು ಕಲ್ಲುಗೋಡಿನ ನಿವಾಸಿ ಗುರು ಹೇಳುತ್ತಾರೆ.
ಪ್ರವಾಸಿಗರ ಹಾವಳಿಯಿಂದ ಅಂಬಾತೀರ್ಥ ರಸ್ತೆ ಕೂಡ ಹದಗೆಟ್ಟಿದೆ ಎಂದು ಅಂಬಾತೀರ್ಥ, ನಾರಿಕೊಳಲು ಪ್ರದೇಶದ ಗ್ರಾಮಸ್ಥರು ದನಿಗೂಡಿಸುತ್ತಾರೆ.
