ಕಳಸ:ಕಳೆದ ವರ್ಷ ಶಾಲಾ ಕ್ರೀಡಾಕೂಟದ ನಡಿಗೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ಕಳಸದ ವಿದುಷಾ ಜೈನ್ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕಿರಿಯರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗಳಿಸಿ ಮುಂಬಡ್ತಿ ಪಡೆದಿದ್ದಾರೆ.
18ರ ವಯೋಮಾನದವರ 3000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರತಿನಿಧಿಸಿದ್ದ ವಿದುಷಾ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕ ಗಳಿಸಿದ್ದಾರೆ ಎಂದು ಅವರ ಕೋಚ್ ಕೆಳಗೂರು ರಮೇಶ್ ತಿಳಿಸಿದ್ದಾರೆ.
ಕಳೆದ ವರ್ಷ ಬಾಲಕಿಯರ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ್ದ ವಿದುಷಾ ಈ ಬಾರಿ 18ರ ವಯೋಮಾನದವರ ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ. ಕಳಸ ಜೆಇಎಂ ಶಾಲಾ ಹಳೆ ವಿದ್ಯಾರ್ಥಿ ಆಗಿರುವ ವಿದುಷಾ ಸದ್ಯಕ್ಕೆ ಸಂಗಮೇಶ್ವರ ಪೇಟೆಯಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕಳಸದ ವೀಣಾ ಮತ್ತು ಸತ್ಯೇಂದ್ರ ಜೈನ್ ಅವರ ಪುತ್ರಿ.

ಕಳೆದ ವರ್ಷ ಶಾಲಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ವಿದುಷಾ ಈ ಬಾರಿ ಮುಕ್ತ ಕ್ರೀಡಾಕೂಟದಲ್ಲಿ ಬೆಳ್ಲಿ ಪದಕ ಗಳಿಸಿದ್ದಾರೆ.16ನೇ ವಯಸ್ಸಿನಲ್ಲೇ ತನಗಿಂತ ಹಿರಿಯರ ಜೊತೆ ಸ್ಪರ್ಧಿಸಿ ಪದಕ ಗಳಿಸಿರುವ ವಿದುಷಾ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಅವಕಾಶಗಳು ಇವೆ ಎಂದು ಕೋಚ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
‘ನನ್ನ ಸಾಧನೆಗೆ ಬೆನ್ನೆಲುಬಾಗಿ ತಂದೆ, ತಾಯಿ, ಪೂರ್ಣಪ್ರಜ್ಞಾ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವರ್ಗ, ದೈಹಿಕ ಶಿಕ್ಷಕ ನಿಖಿಲ್, ಮಾರ್ಗದರ್ಶನ ಮತ್ತು ಸಲಹೆ ನೀಡುತ್ತಿರುವ ರೈಲ್ವೆ ಕೋಚ್ ಅರುಣ್ ಡಿಸೋಜಾ ಹಾಗೂ ತರಬೇತುದಾರ ರಮೇಶ್ ಕೆಳಗೂರು ಅವರಿಗೆ ವಿದುಷಾ ಕೃತಜ್ಞತೆ ಸಲ್ಲಿಸಿದ್ದಾರೆ.
