ಕಳಸ:ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಬೀಡು ಸಮೀಪದ ಸೂಜಿಗುಡ್ಡ ಮತ್ತು ಮಾಡ್ಗಲ್ ಗುಡ್ಡದಲ್ಲಿ ಚಾರಣಕ್ಕೆ ಅವಕಾಶ ಕಲ್ಪಿಸಲು ಸಹಕಾರ ನೀಡುವಂತೆ ಅಲ್ಲಿನ ಗ್ರಾಮಸ್ಥರು ಶಾಸಕಿ ನಯನಾ ಮೋಟಮ್ಮ ಅವರಿಗೆ ಮನವಿ ಮಾಡಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಒಳಪಡುವ ಸೂಜಿಗುಡ್ಡ ಮತ್ತು ಮಾಡ್ಗಲ್ ಗುಡ್ಡಗಳಿಗೆ ಚಾರಣಕ್ಕೆ ಅವಕಾಶ ನೀಡಿದರೆ ನೆಲ್ಲಿಬೀಡು ಆಸುಪಾಸಿನ ಗ್ರಾಮಗಳಲ್ಲಿ ಸ್ಥಳೀಯ ಆರ್ಥಿಕತೆಗೆ ಅವಕಾಶ ಸಿಗುತ್ತದೆ ಎಂದು ನೆಲ್ಲಿಬೀಡು, ಜಾಂಬಳೆ, ಕೆಂಗನಕೊಂಡ, ಕೋಣೆಮನೆ, ಕತ್ತಡಕ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ನೆಲ್ಲಿಬೀಡು ಆಸುಪಾಸಿನಲ್ಲಿ ಪ್ರತಿವರ್ಷವೂ ತೀವ್ರವಾದ ಮಳೆ ಗಾಳಿಯಿಂದ ಕೃಷಿ ಕಷ್ಟಸಾಧ್ಯವಾಗಿದೆ.ಕೃಷಿಕರ ಜೀವನೋಪಾಯಕ್ಕೆ ಬೇರೆ ದಾರಿಯೇ ಇಲ್ಲದೆ ಕಂಗಾಲಾಗಿದ್ದಾರೆ.ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯು ಬಾಗಿಲು ಮುಚ್ಚಿದಾಗಿನಿಂದ ಸ್ಥಳೀಯರ ಆದಾಯಕ್ಕೂ ಕುತ್ತು ಬಂದಿದೆ ಎಂದು ಗ್ರಾಮಸ್ಥರು ವಿವರಿಸಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿನ ನೇತ್ರಾವತಿ, ಕುದುರೆಮುಖ ಗಿರಿಶ್ರೇಣಿ, ಗಂಗಡಿಕಲ್ಲು ಮತ್ತು ಕುರಿಂಜಾಲು ಚಾರಣಗಳಿಗೆ ಪ್ರತಿ ವಾರವೂ ಬೇಡಿಕೆ ಹೆಚ್ಚುತ್ತಿದೆ. ಇದರ ಜೊತೆಗೆ ಸೂಜಿಗುಡ್ಡ ಮತ್ತು ಮಾಡ್ಗಲ್ ಗುಡ್ಡವನ್ನೂ ಚಾರಣಕ್ಕೆ ತೆರೆಯಬಹುದಾಗಿದೆ. ಕೆಂಗನಕೊಂಡದ ಜಲಪಾತವನ್ನೂ ಕೂಡ ಪ್ರವಾಸಿಗರು ಇಷ್ಟ ಪಡುತ್ತಾರೆ. ಈ ಪ್ರದೇಶಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚುತ್ತದೆ.ಗ್ರಾಮಸ್ಥರ ಜೀವನಮಟ್ಟವೂ ಏರಿ ಊರಿನ ಅಭಿವೃದ್ಧಿಯೂ ಆಗುತ್ತದೆ ಎಂದು ಗ್ರಾಮಸ್ಥರು ಶಾಸಕರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.

ಮನವಿ ಪತ್ರವನ್ನು ಸ್ಥಳೀಯರಾದ ಪ್ರಶಾಂತ್ ನೆಲ್ಲಿಬೀಡು, ಅಶೋಕ್, ಚೇತನ್, ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ ಶ್ರೇಣಿಕ, ಮುಖಂಡರಾದ ವಿಶ್ವನಾಥ್, ರಾಜೇಂದ್ರ ಪ್ರಸಾದ್, ಚಂದ್ರಮೋಹನ್, ಶಾಸಕರ ಆಪ್ತ ಕಾರ್ಯದರ್ಶಿ ಸಂಶುದ್ದೀನ್ ಮೂಲಕ ಶಾಸಕರಿಗೆ ರವಾನೆ ಮಾಡಿದರು.
