ಕಳಸ:ಇಲ್ಲಿನ ಶ್ರೀ ಕಳಸೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಇರುವ ಪ್ರಮುಖ ಶಾಸನವಾದ ಇಮ್ಮಡಿ ಭೈರರಸರ ಶಾಸನದ ಮಹತ್ವವನ್ನು ಇತಿಹಾಸ ತಜ್ಞ ಹೆಚ್.ಆರ್.ಪಾಂಡುರಂಗ ಶುಕ್ರವಾರ ಸಾರ್ವಜನಿಕರಿಗೆ ತಿಳಿಸಿದರು.
ಕರ್ನಾಟಕ ಇತಿಹಾಸ ಅಕಾಡಿಮೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ಈ ಶಾಸನಕ್ಕೆ ಪೂಜೆ ಸಲ್ಲಿಸಲಾಯಿತು. ಆನಂತರ ಈ ಶಾಸನದ ಮಹತ್ವ ವಿವರಿಸಿದ ಪಾಂಡುರಂಗ, ಕಳಸ ಮತ್ತು ಕಳಸೇಶ್ವರ ದೇವಸ್ಥಾನದ ಮಟ್ಟಿಗೆ ಅತ್ಯಂತ ಮಹತ್ವದ ಈ ಶಾಸನವನ್ನು ಕ್ರಿ.ಶ.1515ರಲ್ಲಿ ಬರೆಸಲಾಗಿದೆ ಎಂದರು.
ಕಳಸ-ಕಾರ್ಕಳ ರಾಜ್ಯ ಆಳುತ್ತಿದ್ದ ಸಾಮಂತರಾಜ ಇಮ್ಮಡಿ ಭೈರರಸ ತನ್ನ ಮೇಲೆ ವಿಜಯನಗರ ಚಕ್ರವರ್ತಿ ಕೃಷ್ಣದೇವರಾಯ ದಂಡೆತ್ತಿ ಬಂದಾಗ ಬೇಸಿಗೆ ರಾಜಧಾನಿ ಆಗಿದ್ದ ಕಳಸಕ್ಕೆ ಬಂದು ಆಗ ಶಿಥಿಲಗೊಂಡಿದ್ದ ಕಳಸೇಶ್ವರ ದೇವಸ್ಥಾನದಲ್ಲಿ ನಿಂತು ಸಂಕಷ್ಟದಿಂದ ಪರಿಹರಿಸುವಂತೆ ಪ್ರಾರ್ಥನೆ ಮಾಡಿದ್ದರು. ವಿಜಯನಗರ ಸೈನ್ಯ ಭೈರರಸರಿಗೆ ಹಾನಿ ಮಾಡದೆ ವಾಪಸ್ ತೆರಳಿದಾಗ ಕಳಸೇಶ್ವರ ದೇವಸ್ಥಾನವನ್ನು 1516ರಲ್ಲಿ ಜೀರ್ಣೋದ್ಧಾರ ಮಾಡಿದ ಬಗ್ಗೆ ಈ ಶಾಸನ ತಿಳಿಸುತ್ತದೆ ಎಂದು ಪಾಂಡುರಂಗ ಮಾಹಿತಿ ಕೊಟ್ಟರು.

1517ರಲ್ಲಿ ಕಳಸ ಚಂದ್ರನಾಥ ಬಸದಿ ಸನ್ನಿಧಿಯಲ್ಲಿ ಭೈರರಸ, ಕಳಸೇಶ್ವರ ದೇವಸ್ಥಾನಕ್ಕೆ ಸುತ್ತಮುತ್ತಲಿನ ಕಲ್ಲುಗೋಡು, ಹೊರನಾಡು, ಸಂಸೆ, ಹೊಸೂರು, ಎಡೂರು, ಮರಸಣಿಗೆ, ಕೆಳಗೂರು, ಕಳಕೋಡು ಮತ್ತಿತರ ಗ್ರಾಮಗಳಲ್ಲಿ ಬರುವ ಕಂದಾಯದ ಆದಾಯವಾದ 30 ಗದ್ಯಾಣವನ್ನು ದೇವಸ್ಥಾನಕ್ಕೆ ಪ್ರತಿ ವರ್ಷವೂ ಒಪ್ಪಿಸುವ ಬಗ್ಗೆಯೂ ಈ ಶಾಸನದಲ್ಲಿ ಬರೆದಿದೆ ಎಂದೂ ಪಾಂಡುರಂಗ ತಿಳಿಸಿದರು.
ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಕಳಸೇಶ್ವರನಿಗೆ ವಿಶೇಷ ಪೂಜೆ ನೆರವೇರುವ ಬಗ್ಗೆ ಖಾತರಿಪಡಿಸಬೇಕು. ಶಾಸನದಲ್ಲಿ ಉಲ್ಲೇಖಿತ ವಿಷಯಗಳಿಗೆ ಅಪಚಾರವಾದರೆ ಲಿಂಗವನ್ನು ಭಗ್ನ ಮಾಡಿದಂತೆ ಮತ್ತು ಚಂದ್ರನಾಥ ವಿಗ್ರಹ ನಾಶ ಮಾಡಿದ ಪಾಪಕ್ಕೆ ಗುರಿಯಾಗುತ್ತಾರೆ ಎಂದೂ ಶಾಸನದಲ್ಲಿ ಉಲ್ಲೇಖ ಇದೆ ಎಂದೂ ಪಾಂಡುರಂಗ ತಿಳಿಸಿದರು.

ಕಾರ್ಯಕ್ರಮದಲ್ಲಿ ಇತಿಹಾಸ ಅಕಾಡೆಮಿಯ ಸುಂದರೇಶ್, ವಿವಿಧ ಸಂಘಟನೆಗಳ ಅಜಿತ್, ಮಮ್ತಾಜ್, ವಿನಾಯಕ್, ಗೀತಾ ಮಕ್ಕಿಮನೆ, ಭೋಜೇಗೌಡ, ದುರ್ಗಾಪ್ರಸಾದ್ ಶಾಸ್ತ್ರಿ, ರಂಗಣ್ಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸ ಸಚಿನ್ ಇದ್ದರು.
