ಕಳಸ:ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯ ನಂತರ ಕಸ್ತೂರಿ ರಂಗನ್ ವರದಿ ಅನುಷ್ಟಾನಕ್ಕೆ ವಿರೋಧಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ ಎಂದು ಸಂಘದ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ ತಿಳಿಸಿದರು.
ಸಂಘದ ನಿರ್ದೇಶಕರ ಸಭೆಯಲ್ಲಿ ಮಾತನಾಡಿದ ಅವರು,ಇದೇ ಭಾನುವಾರ ನಡೆಯುವ ಸರ್ವ ಸದಸ್ಯರ ಸಭೆಗೆ ತಾಲ್ಲೂಕಿನ ನೂರಾರು ಕೃಷಿಕರು ಬರುತ್ತಾರೆ. ಇದೇ ಅವಕಾಶ ಬಳಸಿಕೊಂಡು ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಲು ಕೃಷಿಕರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಕಳಸ ತಾಲ್ಲೂಕಿನ ಕೆಳಗೂರು, ಕಳಕೋಡು, ಬಲಿಗೆ, ಹೊರನಾಡು, ಬಲಿಗೆ, ಸಂಸೆ, ಇಡಕಿಣಿ ಮತ್ತಿತರ ಪ್ರದೇಶ ಕಸ್ತೂರಿರಂಗನ್ ವರದಿಯಲ್ಲಿ ವಿಶೇಷ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ. ಆದ್ದರಿಂದ ಈ ಪ್ರದೇಶದ ಜನರು ಚಿಂತೆಗೀಡಾಗಿದ್ದಾರೆ. ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಯಲಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ ಎಂದೂ ಮಂಜಪ್ಪಯ್ಯ ತಿಳಿಸಿದರು.
ಸಂಘದ ಉಪಾಧ್ಯಕ್ಷೆ ಆಶಾಲರತಾ ಡಿ ಜೈನ್, ನಿರ್ದೇಶಕರಾದ ಅನಿಲ್ ಡಿಸೋಜ, ನಾರಾಯಣ, ಕೃಷ್ಣಪ್ಪ, ದೇಜಪ್ಪ, ಗಾಯತ್ರಿ, ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
