ಕಳಸ:ಇಲ್ಲಿನ ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 34 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ.
ಭಾನುವಾರ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಮಂಜಪ್ಪಯ್ಯ, ಕಳೆದ ಸಾಲಿನಲ್ಲಿ ಸಂಸ್ಥೆಯು 593 ಕೋಟಿ ರೂಪಾಯಿ ವ್ಯವಹಾರ ನಡೆಸಿ 1.69 ಕೋಟಿ ರೂಪಾಯಿ ಲಾಭ ಗಳಿಸಿದೆ. ಸಂಘದ ಸ್ಥಿರಾಸ್ತಿ ಹೆಚ್ಚಿಸಿಕೊಳ್ಳಲು ಲಾಭದ ಹಣ ವಿನಿಯೋಗ ಮಾಡುತ್ತಿದ್ದು ನಿವ್ವಳ ಲಾಭ 34 ಲಕ್ಷ ಆಗಿದೆ ಎಂದು ವಿವರಿಸಿದರು.
ಕಚಗಾನೆಯಲ್ಲಿ ಸುಸಜ್ಜಿತವಾದ ಕಾಫಿ ಮತ್ತು ಅಡಿಕೆ ಸಂಸ್ಕರಣಾ ಘಟಕ ಸ್ಥಾಪನೆ ಮಾಡಲಾಗಿದೆ. 20 ಸಾವಿರ ಮೂಟೆ ಕಾಫಿ ಶೇಖರಣೆ ಮಾಡಬಹುದಾದ ಗೋದಾಮು ಕೂಡ ನಿರ್ಮಿಸಲಾಗಿದೆ. ಅಲ್ಲಿ ಹೂಡಿರುವ ಬಂಡವಾಳದ ಬಡ್ಡಿ ಕೂಡ ಸಂಘಕ್ಕೆ ಬರುತ್ತಿಲ್ಲ. ಅದರೆ ಸದಸ್ಯರ ಅನುಕೂಲಕ್ಕಾಗಿ ಬಂಡವಾಳ ಹೂಡಲಾಗಿದೆ. ಸಂಘದ ಎಲ್ಲ ಸ್ಥಿರಾಸ್ತಿಗಳ ಮೌಲ್ಯ 21 ಕೋಟಿಗೂ ಹೆಚ್ಚು ಇದೆ ಎಂದರು.
ಕಾಫಿ ವ್ಯಾಪಾರದಲ್ಲಿ ಬಹಳಷ್ಟು ಆಪತ್ತು ಇರುವುದರಿಂದ ಆ ಸಾಹಸಕ್ಕೆ ಸಂಘ ಕೈ ಹಾಕಿಲ್ಲ. ನಮ್ಮ ಸಂಸ್ಥೆಯು ವಾಣಿಜ್ಯ ಬ್ಯಾಂಕುಗಳಿಗಿಂತ ಕಡಿಮೆ ಬಡ್ಡಿಗೆ ಸಾಲ ನೀಡುತ್ತಿದ್ದು ಸಣ್ಣ ಕೃಷಿಕರು, ವ್ಯಾಪಾರಿಗಳು ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಸಂಘದ ಆಡಳಿತ ವರದಿ ಓದಿದ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ್, ಸಂಘದಲ್ಲಿ 3522 ಸದಸ್ಯರು ಇದ್ದು 68 ಕೋಟಿ ಠೇವಣಿ, 104 ಕೋಟಿ ರೂಪಾಯಿ ದುಡಿಯುವ ಬಂಡವಾಳ ಇದೆ ಎಂದರು.
ಸಂಘವು ಕಳೆದ ವರ್ಷ 12.45 ಕೋಟಿ ಸರಕು ಮಾರಾಟ ಮಾಡಿದ್ದು ವ್ಯಾಪಾರದಲ್ಲಿ 75 ಲಕ್ಷ ಲಾಭ ಬಂದಿದೆ. 45 ಕೋಟಿ ಸಾಲವು ಸದಸ್ಯರಿಂದ ಬಾಕಿ ಇದ್ದು ಶೇ.3 ಮಾತ್ರ ಸುಸ್ತಿ ಆಗಿದೆ ಎಂದರು.
ಸಂಘದ ಸದಸ್ಯರ ಮಕ್ಕಳಿಗೆ ತಲಾ 3 ಸಾವಿರದಂತೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕಳಸ ಪದವಿ ಕಾಲೇಜಿನ ನಿರ್ಗಮಿತ ಪ್ರಾಂಶುಪಾಲ ವಿನಯ್ ಕುಮಾರ್ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷೆ ಆಶಾಲತಾ ಡಿ ಜೈನ್, ನಿರ್ದೇಶಕರಾದ ಅನಿಲ್ ಗ್ಯಾವಿನ್ ಡಿಸೋಜ, ನಾರಾಯಣ, ಜಗದೀಶ್, ಮಹೇಶ್, ದೇಜಪ್ಪ, ಮಧುವನ್, ರತಿ, ಕೃಷ್ಣಪ್ಪ, ಗಾಯತ್ರಿ, ರಾಜೇಂದ್ರ ಭಾಗವಹಿಸಿದ್ದರು.
