ಕಳಸ:ಇದೇ 19ರ ಶನಿವಾರ ಬಾಳೆಹೊನ್ನೂರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡುವ ಸಂದರ್ಭದಲ್ಲಿ ಕಸ್ತೂರಿರಂಗನ್ ವರದಿಯಿಂದ ಬಾಧಿತರಾಗುವ ಕೃಷಿಕರು ಭಾಗವಹಿಸಬೇಕು ಎಂದು ಕಳಸ ಕೃಷಿ ಮತ್ತು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜಪ್ಪಯ್ಯ ಕೋರಿದ್ದಾರೆ.
ಕಳಸ ತಾಲ್ಲೂಕಿನ ಬಹುಪಾಲು ಕೃಷಿಭೂಮಿ ಕಸ್ತೂರಿರಂಗನ್ ವರದಿಯಲ್ಲಿ ಪರಿಸರ ಅತಿಸೂಕ್ಮ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ. ವರದಿ ಅಂಗೀಕಾರ ಆದಲ್ಲಿ ಕಳಸ ತಾಲ್ಲೂಕಿನ ಕೃಷಿ, ಆರ್ಥಿಕತೆ ಹಾದಿ ತಪ್ಪುತ್ತದೆ. ವ್ಯಾಪಾರ, ವಹಿವಾಟು, ಪ್ರವಾಸೋದ್ಯಮಕ್ಕೂ ಅಡ್ಡಿ ಆಗುತ್ತದೆ. ಕಳಸ ಪಟ್ಟಣ ಬಿಕೋ ಎನ್ನಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿನಲ್ಲಿ ವಿಶೇಷ ಸಭೆ ನಡೆಸಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಳಸದ ಪರವಾಗಿ ವಿಶೇಷ ಅಹವಾಲು ಸಲ್ಲಿಸಬೇಕಿದೆ. ತಾಲ್ಲೂಕಿನ ಕೃಷಿಕರು ಮತ್ತು ಬಾಧಿತರಾಗುವ ಎಲ್ಲ ವರ್ಗದ ಜನರು ಬಾಳೆಹೊನ್ನೂರಿನ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದೂ ಮಂಜಪ್ಪಯ್ಯ ಮನವಿ ಮಾಡಿದ್ದಾರೆ.
