ಕಳಸ:ಹೊಸದಾಗಿ ರಚನೆಯಾಗಿರುವ ಕಳಸ ಟೂರಿಸಂ ಫೋರಂ ಇದೇ 28ರ ಸೋಮವಾರದಂದು ಪಟ್ಟಣದಲ್ಲಿ ಪ್ರವಾಸೋದ್ಯಮ ದಿನಾಚರಣೆ ಆಯೋಜಿಸಿದೆ.
ಇದರ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ದುಗ್ಗಪ್ಪನಕಟ್ಟೆಯಿಂದ ಅರಮನೆಮಕ್ಕಿವರೆಗೆ ಸ್ತಬ್ಧಚಿತ್ರಗಳ ಜಾಥಾ ನಡೆಯಲಿದೆ. ಆನಂತರ ಅರಮನೆಮಕ್ಕಿಯ ದಕ್ಷಿಣ ಕಾಶಿ ಸಭಾಭವನದಲ್ಲಿ ನಡೆಯುವ ಸಭೆಯಲ್ಲಿ ಕಳಸ ಟೂರಿಸಂ ಫೋರಂ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ ಭಾಗವಹಿಸಲಿದ್ದಾರೆ. ಕಳಸ ತಹಶೀಲ್ದಾರ್ ಮಂಜುನಾಥ್, ಕಳಸೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಮಂಜುನಾಥ್, ಕಳಸ ಟೂರಿಸಂ ಫೋರಂ ಅಧ್ಯಕ್ಷ ಸತೀಶ್ ಜೈನ್, ಗೌರವಾಧ್ಯಕ್ಷ ರವಿ ರೈ, ವಲಯ ಅರಣ್ಯಾಧಿಕಾರಿ ಗೌರವ್, ಕಳಸ ಠಾಣಾಧಿಕಾರಿ ಚಂದ್ರಶೇಖರ್ ಭಾಗವಹಿಸಲಿದ್ದಾರೆ.
ಕಳಸ ತಾಲ್ಲೂಕಿನ ಪರಿಸರ ಪ್ರವಾಸೋದ್ಯಮ ತಾಣಗಳಲ್ಲಿ ಆಗಬೇಕಾದ ಮೂಲಸೌಕರ್ಯದ ಅಭಿವೃದ್ಧಿ ಬಗ್ಗೆ ಸಭೆಯಲ್ಲಿ ಗಮನ ಸೆಳೆಯಲಾಗುತ್ತದೆ. ಕಳಸ ತಾಲ್ಲೂಕಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಇರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿ, ಜವಾಬ್ದಾರಿಯುತ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಟೂರಿಸಂ ಫೋರಂ ಕಾರ್ಯದರ್ಶಿ ಚಂದ್ರಮೋಹನ್ ತಿಳಿಸಿದ್ದಾರೆ.
