ಕಳಸ:ಇಲ್ಲಿನ ಕ್ರೀಡಾಪಟುಗಳಾದ ವಿದುಷಾ ಮತ್ತು ಫಾಯಸ್ ಇಬ್ರಾಹಿಂ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ತುಮಕೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗಳಿಸಿದ್ದಾರೆ.
ಜೆಇಎಂ ಶಾಲೆ ಹಳೆ ವಿದ್ಯಾರ್ಥಿ, ಸಂಗಮೇಶ್ವರ ಪೇಟೆ ಪೂರ್ಣಪ್ರಜ್ಷ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಆಗಿರುವ ವಿದುಷಾ ಜೈನ್ 3000 ಮೀಟರ್ ನಡಿಗೆ 18ರ ವಯೋಮಿತಿ ಸ್ಪರ್ಧೆಯಲ್ಲಿ ಅಗ್ರಸ್ಥಾನದೊಂದಿಗೆ ಚಿನ್ನ ಗೆದ್ದಿದ್ದಾರೆ.

ಜೆಇಎಂ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಫಾಯಸ್ ಇಬ್ರಾಹಿಂ 16ರ ವಯೋಮಿತಿ ವಿಭಾಗದ ಗುಂಡು ಎಸೆತದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿ ಕಂಚಿನ ಪದಕ ಪಡೆದಿದ್ದಾರೆ ಎಂದು ಇವರಿಬ್ಬರ ಕೋಚ್ ಕೆಳಗೂರು ರಮೇಶ್ ತಿಳಿಸಿದ್ದಾರೆ.
ಕಳಸ ತಾಲ್ಲೂಕಿನಲ್ಲಿ ಬಹಳಷ್ಟು ಪ್ರತಿಭಾವಂತ ಕ್ರೀಡಾಪಟುಗಳು ಇದ್ದು ಇನ್ನಷ್ಟು ಪ್ರೋತ್ಸಾಹದ ಅಗತ್ಯ ಇದೆ ಎಂದು ರಮೇಶ್ ಹೇಳುತ್ತಾರೆ.
