ಕಳಸ:ಹೊರನಾಡಿನ ರೋಟರಿ ಸೇವಾದಳದ ಆಶ್ರಯದಲ್ಲಿ ಹೊರನಾಡಿನಲ್ಲಿ ಸೋಮವಾರ ರಾತ್ರಿ ನಡೆದ ಹಾಸ್ಯ ಯಕ್ಷೋತ್ಸವದಲ್ಲಿ ಪ್ರಶಸ್ತಿ ವಿಜೇತರನ್ನು ಸನ್ಮಾನಿಸುವುದರ ಜೊತೆಗೆ ಅಶಕ್ತರನ್ನು ಆಧರಿಸುವ ಕೆಲಸವೂ ನಡೆಯಿತು.
ಮೊದಲಿಗೆ ಹಾಸ್ಯಕಲಾವಿದ ಮೈಸೂರು ಆನಂದ ಅವರಿಂದ ಹಾಸ್ಯಸಂಜೆ ನಡೆಯಿತು. ಆನಂತರ ನಡೆದ ಸಭೆಯಲ್ಲಿ ಹೊರನಾಡಿನ 10 ರೋಗಿಗಳಿಗೆ ತಲಾ 5 ಸಾವಿರ ರೂಪಾಯಿ ನಗದು ವಿತರಿಸಲಾಯಿತು.
ಜಿ.ಭೀಮೇಶ್ವರ ಜೋಷಿ ಮಾತನಾಡಿ, ಹೊರನಾಡಿನ ರೋಟರಿ ಸೇವಾದಳವು ಸಮಾಜಮುಖಿ ಚಟುವಟಿಕೆ ಜೊತೆ ಜೊತೆಗೆ ಸಾಂಸ್ಕ್ರತಿಕವಾಗಿಯೂ ತನ್ನ ಛಾಪು ಮೂಡಿಸುತ್ತಿದೆ ಎಂದರು.
ಹಳುವಳ್ಳಿಯ ಯಕ್ಷಗಾನ ಕಲಾವಿದೆ ಜ್ಯೋತಿ ದೀರ್ಘ ಕಾಲದಿಂದ ಶ್ರಮವಹಿಸಿ ಆ ಕಲೆಗೆ ಸೇವೆ ಸಲ್ಲಿಸಿದ್ದಾರೆ.ಅವರಿಗೆ ಸಂದ ಯಕ್ಷಸಿರಿ ಪ್ರಶಸ್ತಿಯಿಂದ ಆ ಪ್ರಶಸ್ತಿಗೆ ಗೌರವ ಬಂದಿದೆ ಎಂದೂ ಜೋಷಿ ಹೇಳಿದರು.

ಇದೇ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ವಿಜೇತ ಜಿ.ಕೆ.ಮಂಜಪ್ಪಯ್ಯ ಮತ್ತು ಯಕ್ಷ ಸಿರಿ ಪ್ರಶಸ್ತಿ ವಿಜೇತರಾದ ಯಕ್ಷಗಾನ ಕಲಾವಿದೆ, ಯಕ್ಷಗುರು ಜ್ಯೋತಿ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಸಂಘಟನೆಗಳ ಮುಖಂಡರಾದ ಶ್ರೇಣಿಕ, ರಾಜೇಂದ್ರ ಪ್ರಸಾದ್, ಶ್ರೀಕಾಂತ್ ಕೆಳಭಾಗ, ಬ್ರಹ್ಮದೇವ, ರವಿ ರೈ, ಕೆ.ಆರ್.ಪ್ರಭಾಕರ್, ಕೆ.ಕೆ.ಬಾಲಕೃಷ್ಣ ಭಟ್, ರೋಟರಿ ಸಮುದಾಯ ದಳದ ಅಧ್ಯಕ್ಷ ಸಂತೋಷ್ , ದ್ವಾರಕಾನಾಥ್ ಭಾಗವಹಿಸಿದ್ದರು.
ಆನಂತರ ಬ್ರಹ್ಮಾವರ ತಾಲ್ಲೂಕಿನ ಮೆಕ್ಕೆಕಟ್ಟು ಮೇಳದ ಕಲಾವಿದರು ಪ್ರಶ್ನಾರ್ಥಕ ಎಂಬ ಹಾಸ್ಯ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು.
