default
ಕಳಸ:ಎರಡು ವರ್ಷದ ಹಿಂದೆ ನ್ಯಾಕ್ ಗುಣಮಟ್ಟ ಪರೀಕ್ಷೆಯಲ್ಲಿ ಎ ಪ್ಲಸ್ ಶ್ರೇಣಿ ಪಡೆದಿದ್ದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಭರ್ಜರಿ ಫಲಿತಾಂಶ ಪಡೆದು ಗಮನ ಸೆಳೆದಿದೆ.
ಗ್ರಾಮೀಣ ಪರಿಸರದ ಈ ಕಾಲೇಜು ಯಾವುದೇ ಖಾಸಗಿ ಕಾಲೇಜಿಗೂ ಕಡಿಮೆ ಇಲ್ಲದಂತೆ ಗುಣಮಟ್ಟದ ಶಿಕ್ಷಣ ನಿಡುತ್ತಿದೆ.ಕಾಲೇಜು ಅಂತಿಮ ವರ್ಷದ ಬಿ.ಎ. ವಿಭಾಗದಲ್ಲಿ ಶೇ.100 ಮತ್ತು ಅಂತಿಮ ವರ್ಷದ ಬಿ.ಕಾಂ ವಿಭಾಗದಲ್ಲಿ ಶೇ.94 ಫಲಿತಾಂಶ ಪಡೆದಿದೆ.
ಬಿ.ಎ ವಿಭಾಗದ ಎಲ್ಲ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 19 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ ಮತ್ತು 11 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಆಗಿದ್ದಾರೆ.
ಬಿಕಾಂ ವಿಭಾಗದ 33 ವಿದ್ಯಾರ್ಥಿಗಳ ಪೈಕಿ 31 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ.14 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ ಮತ್ತು 17 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಆಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ವಿನಯ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಬಿ.ಎ ವಿಭಾಗದಲ್ಲಿ ಶೇ.92 ಅಂಕ ಗಳಿಸಿದ ಅಂಕುಶ ಜೆ. ಮತ್ತು ಶೇ.91 ಅಂಕ ಗಳಿಸಿದ ಎಸ್.ನಿಶ್ಮಿತಾ ಮೊದಲ ಎರಡು ಸ್ಥಾನ ಪಡೆದಿದ್ದಾರೆ.ಬಿ.ಕಾಂ ವಿಭಾಗದಲ್ಲಿ ಶೇ.87 ಅಂಕ ಗಳಿಸಿದ ಅಪೂರ್ವ ಮತ್ತು ಶೇ.86 ಅಂಕ ಗಳಿಸಿದ ಡಿ.ಎಲ್.ಇಂಚರಾ ಮೊದಲ ಎರಡು ಸ್ಥಾನ ಗಳಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಹಿತ್ತಲಮಕ್ಕಿ ರಾಆಜೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ. ಕಾಲೇಜಿನಲ್ಲಿ ಪ್ರವೇಶ ಪಡೆಯುವ 50 ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ತಾವೇ ಭರಿಸುವುದಾಗಿ ಅವರು ಈಗಾಗಲೇ ಪ್ರಕಟಿಸಿದ್ದಾರೆ.

ಸಂತಸದ ಸುದ್ದಿ ಎಂದರೆ ಈ ವರ್ಷ ಈ ಕಾಲೇಜಿನಲ್ಲಿ ಬಿಸಿಎ ಪದವಿ ಕೂಡ ಆರಂಭವಾಗುತ್ತಿದೆ. ಈ ಪದವಿಗೆ ಉದ್ಯೋಗಾವಕಾಶ ಹೆಚ್ಚಿರುವುದರಿಂದ ಗ್ರಾಮೀಣ ಮಕ್ಕಳಿಗೆ ಕೈಗೆ ಎಟುಕುವ ವೆಚ್ಚದಲ್ಲೇ ಬಿಸಿಎ ಶಿಕ್ಷಣ ಕೂಡ ಸಿಗುತ್ತಿದೆ.
