ಕಳಸ:ಪಟ್ಟಣದ ಕಳಸೇಶ್ವರ ಸ್ವಾಮಿ ರಥೋತ್ಸವ ಮುಂದಿನ ವಾರ ನಡೆಯಲಿದ್ದು ಆ ಸಂದರ್ಭದಲ್ಲಿ ಜೂಜು ನಡೆಸಲು ಅವಕಾಶ ನೀಡದಂತೆ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಭಾರತ ಕಮ್ಯುನಿಸ್ಟ್ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಗೋಪಾಲ ಶೆಟ್ಟಿ ಪತ್ರ ಬರೆದಿದ್ದಾರೆ.
ಕಳಸೇಶ್ವರನ ಜಾತ್ರೆಯಲ್ಲಿ ಜನರು ಭಕ್ತಿಭಾವದಿಂದ ಭಾಗವಹಿಸುತ್ತಾರೆ.ಇಲ್ಲಿ ಶೇ.60ಕ್ಕೂ ಹೆಚ್ಚು ಜನರು ಕಾರ್ಮಿಕರೇ ಸೇರುತ್ತಾರೆ. ಈ ಸಂದರ್ಭದಲ್ಲಿ ಜೂಜು ನಡೆಸುತ್ತಾ ಬಡವರ ಹಣ ಕೊಳ್ಳೆ ಹೊಡೆಯುವ ತಂಡ ಅನೇಕ ವರ್ಷಗಳಿಂದ ವ್ಯವಸ್ಥಿತವಾಗಿ ಕೆಲಸ ಮಾಡುತ್ತದೆ ಎಂದು ಗೋಪಾಲ ಶೆಟ್ಟಿ ವಿವರಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಜೂಜು ನಡೆಸಲು ಅವಕಾಶ ಕೊಟ್ಟಿದ್ದರಿಂದ ಸಬ್ ಇನ್ಸ್ಪೆಕ್ಟರ್ ಒಬ್ಬರ ಅಮಾನತ್ತು ಆಗಿತ್ತು. ಕಳೆದ ವರ್ಷ ಕೂಡ ಜೂಜು ನಡೆಸುವ ಪ್ರಯತ್ನ ನಡೆದಿತ್ತು.ಇದರಿಂದಾಗಿ ಕಾರ್ಮಿಕರು ಮತ್ತು ಮಹಿಳೆಯರು 6 ತಿಂಗಳು ಕೂಡಿಟ್ಟ ಹಣವೆಲ್ಲ ವ್ಯರ್ಥವಾಗಿ ಹೋಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಆದ್ದರಿಂದ ಈ ವರ್ಷ ಜಾತ್ರೆಯ ಸಂದರ್ಭದಲ್ಲಿ ಜೂಜು ಅಥವಾ ಯಾವುದೇ ಸಮಾಜಘಾತುಕ ಚಟುವಟಿಕೆ ನಡೆಯದಂತೆ ಜಿಲ್ಲಾಡಳಿತ ಎಚ್ಚರ ವಹಿಸಬೇಕು ಎಂದೂ ಗೋಪಾಲ ಶೆಟ್ಟಿ ಕೋರಿದ್ದಾರೆ.
