ಕಳಸ:ಸಹಕಾರ ರತ್ನ ಪ್ರಶಸ್ತಿ ವಿಜೇತರಾದ ಇಲ್ಲಿನ ಕಳಸ ಕೃಷಿ ಮತ್ತು ಸಹಕಾರ ಪತ್ತಿನ ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ಅವರನ್ನು ತಾಲ್ಲೂಕಿನ ನಾಗರೀಕರ ಪರವಾಗಿ ಮಂಗಳವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ನೆರವೇರಿಸಿ ಮಾತನಾಡಿದ ಹೊರನಾಡಿನ ಜಿ.ಭೀಮೇಶ್ವರ ಜೋಷಿ, ಮಂಜಪ್ಪಯ್ಯ ಕಳೆದ 30 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಶಕ್ತಿಯಾಗಿದ್ದಾರೆ.ತನ್ನ ಜೀವನದ ಹೆಚ್ಚಿನ ಅವಧಿಯನ್ನು ಸಂಸ್ಥೆಗಾಗಿ ವಿನಿಯೋಗಿಸುತ್ತಿದ್ದು ಪ್ರಾಮಾಣಿಕವಾಗಿ ಸಂಸ್ಥೆ ಕಟ್ಟಿದ್ದಾರೆ ಎಂದರು.
ಮಂಜಪ್ಪಯ್ಯ ಅವರ ಆದರ್ಶಯುತ ಜೀವನ, ಸಹಕಾರಿ ಕ್ಷೇತ್ರದಲ್ಲಿನ ಯಶಸ್ಸು, ಜನಸಾಮಾನ್ಯರ ಬಗೆಗಿನ ಕಾಳಜಿ ಅನನ್ಯ. ಅವರ ಸರಳತೆ, ಸತತ ಪರಿಶ್ರಮ ಸಂಸ್ಥೆಗೆ ನಿರಂತರ ಲಾಭ ತಂದು ಕೊಡುತ್ತಿದೆ ಎಂದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಕೃಷಿ ಮತ್ತು ಪತ್ತಿನ ಸಹಕಾರ ಸಂಘಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಕಳಸ ಸಂಘ ಮಾದರಿ ಆಗಿದೆ. 3 ದಶಕಗಳಿಂದ ಮಂಜಪ್ಪಯ್ಯ ಈ ಸಂಘವನ್ನು ಅತ್ಯಂತ ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದು ಈಗಿನ ಯುವಕರಿಗೆ ಮಾದರಿ ಆಗಿದೆ. ಸಹಕಾರ ಕ್ಷೇತ್ರದ ಜೊತೆಗೆ ಸಾರ್ವಜನಿಕ ಕ್ಷೇತ್ರಕ್ಕೂ ಅವರು ಕೊಟ್ಟಿರುವ ಕೊಡುಗೆ ಅಪಾರವಾದುದು ಎಂದು ಶ್ಲಾಘಿಸಿದರು.
ರಾಜ್ಯ ಸುಕೋ ಬ್ಯಾಂಕ್ ಅಧ್ಯಕ್ಷ ಮನೋಹರ ಮಸ್ಕಿ ಮಾತನಾಡಿ, ಕೃಷಿಕರ ಉತ್ಪನ್ನಕ್ಕೆ ಉತ್ತಮ ದರ ಸಿಗಬೇಕು ಎಂಬ ಕೇಂದ್ರದ ಕನಸನ್ನು ಕಳಸ ಸಹಕಾರ ಸಂಘವು ತಾಲ್ಲೂಕು ಮಟ್ಟದಲ್ಲಿ ನನಸು ಮಾಡುತ್ತಿದೆ.ಅಡಿಕೆ, ಕಾಫಿ ಸಂಸ್ಕರಣಾ ಘಟಕಗಳ ರೂಪದಲ್ಲಿ ಕೃಷಿಕರ ಬೆಳೆಗಳ ಮೌಲ್ಯವರ್ಧನೆಗೆ ಒತ್ತು ಕೊಡುತ್ತಿದೆ.ಸಂಸ್ಥೆ ಸ್ವಂತ ಬಂಡವಾಳದಲ್ಲಿ ದೊಡ್ಡ ಮಟ್ಟದ ವ್ಯವಹಾರ ನಡೆಸುತ್ತಿದೆ.ಈ ಎಲ್ಲ ಅಂಶ ಪರಿಗಣಿಸಿ ಮಂಜಪ್ಪಯ್ಯ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಕೊಡಲಾಗಿದೆ ಎಂದರು.

ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮಾತನಾಡಿ, ಕಳಸ ಸಹಕಾರ ಸಂಘವು ಕೇವಲ ಬೆಳೆ ಸಾಲ ಕೊಡುವುದಷ್ಟಕ್ಕೆ ಸೀಮಿತವಾಗದೆ ಅನೇಕ ಚಟುವಟಿಕೆ ನಡೆಸಿ 450 ಕೋಟಿ ವ್ಯವಹಾರ ನಡೆಸುತ್ತಿದೆ.ಇದು ಮಂಜಪ್ಪಯ್ಯ ಅವರ ದೂರದರ್ಶಿತ್ವದ ಫಲ ಎಂದರು.
ವಿವಿಧ ಸಂಘಟನೆಗಳ ಮತ್ತು ಸಹಕಾರ ಸಂಘಗಳ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜಪ್ಪಯ್ಯ ನಾನು ಕೃಷಿ ಕುಟುಂಬದಿಂದ ಬಂದಿದ್ದರಿಂದ ನನಗೆ ಕೃಷಿಕರ ಎಲ್ಲ ಸಂಕಷ್ಟದ ಅರಿವು ಇದೆ. ಆದ್ದರಿಂದ ಸಹಕಾರ ಸಂಘದಲ್ಲಿ ಕೃಷಿಕರಿಗೆ ಬೇಕಾದ ಎಲ್ಲ ಸವಲತ್ತು ಮತ್ತು ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಅನುಕೂಲ ಆಯಿತು ಎಂದರು.
ನಮ್ಮ ಸಂಘದಲ್ಲಿ ಇನ್ನೂ ಬಹಳಷ್ಟು ಕೆಲಸ ಬಾಕಿ ಇದೆ.ಸಂಘದ ನಿರ್ದೇಶಕರು, ಸದಸ್ಯರು ಮತ್ತು ಸಿಬ್ಬಂದಿ ಸದಾ ಸಹಕಾರದಿಂದ ಸಂಘ ಈ ಮಟ್ಟಕ್ಕೆ ಬರಲು ಸಾಧ್ಯವಾಗಿದೆ ಎಂದರು.
ಸಂಘದ ಉಪಾಧ್ಯಕ್ಷೆ ಆಶಾಲತಾ ಜೈನ್, ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ್, ನಿರ್ದೇಶಕರಾದ ಅನಿಲ್ ಡಿಸೋಜ, ನಾರಾಯಣ, ಜಗದೀಶ್ ಗೌಡ, ಮಹೇಶ್, ದೇಜಪ್ಪ, ಮಧೂವನ್, ರತಿ, ಕೃಷ್ಣಪ್ಪ, ಗಾಯತ್ರಿ, ರಾಜೇಂದ್ರ, ಬಿಜೆಪಿ ಮುಖಂಡ ಶ್ರೀಕಾಂತ್, ಸಿಪಿಐ ಮುಖಂಡ ಗೋಪಾಲ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಭಾಗವಹಿಸಿದ್ದರು.
