ಕಳಸ:ಮನಮೋಹನ್ ಸಿಂಗ್ ಅವಧಿಯಲ್ಲಿ ನರೇಗಾ ಯೋಜನೆಯಲ್ಲಿ ವರ್ಷಕ್ಕೆ ಒಬ್ಬರಿಗೆ 100 ದಿನಗಳ ಕೆಲಸ ನೀಡಲಾಗುತ್ತಿತ್ತು. ದಿನಕ್ಕೆ 175 ರೂಪಾಯಿ ಕೂಲಿ ನೀಡಲಾಗುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಅದೇ ಯೋಜನೆಯನ್ನು ಮಾರ್ಪಡಿಸಿ ವರ್ಷಕ್ಕೆ ಒಬ್ಬರಿಗೆ 125 ದಿನಗಳ ಕೆಲಸ ಒದಗಿಸುತ್ತಿದೆ.ಕೂಲಿಯನ್ನು ದಿನಕ್ಕೆ 375 ರೂಪಾಯಿಗೆ ಏರಿಸಿದೆ.ಇದರಿಂದ ಪ್ರತಿಯೊಬ್ಬರಿಗೆ ವರ್ಷಕ್ಕೆ 46000 ರೂಪಾಯಿ ಕೂಲಿ ಸಿಗುತ್ತದೆ. ಈ ಯೋಜನೆಯನ್ನು ವಿರೋಧಿಸುವುದು ರಾಜಕೀಯ ಚಿತಾವಣೆ ಅಲ್ಲವೇ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.ಪಟ್ಟಣದಲ್ಲಿ ಶನಿವಾರ ಸಂಜೆ ನಡೆದ
ವಿಬಿ ಜಿರಾಮ್ಜಿ ಯೋಜನೆಯ ಬಗೆಗಿನ ಜಾಗೃತಿ ಪಾದಯಾತ್ರೆಯ ನಂತರ ಅವರು ಮಾತನಾಡಿದರು.
ಕೇಂದ್ರ ಸರ್ಕಾರದಿಂದ ನನ್ನ ಕ್ಷೇತ್ರದ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಬಹಳಷ್ಟು ಹಣ ತಂದಿದ್ದೇನೆ. ಆದರೆ ಜಿಲ್ಲಾಡಳಿತ ಈ ರಸ್ತೆಗಳ ವಿಸ್ತರಣೆಗೆ ಭೂಮಿ ಒದಗಿಸುತ್ತಿಲ್ಲ. ನಾನು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ನಂತರ ಜಿಲ್ಲಾಡಳಿತ ಈ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು
ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ಸರ್ಕಾರ ಕೇಂದ್ರ ಸರ್ಕಾರ ನೀಡಿದ 22 ಸಾವಿರ ಕೋಟಿ ರೂಪಾಯಿ ದುರುಪಯೋಗ ಮಾಡಿದೆ. ಕರ್ನಾಟಕದಲ್ಲಿ ಕೂಡ ರಾಜ್ಯ ಸರ್ಕಾರ ನೂರಾರು ಪ್ರಕರಣದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಸಂಸದರು ವಿವರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಕಾಂಗ್ರೆಸ್ ಸರ್ಕಾರ ತನ್ನ ಆಡಳಿತದ ಎಲ್ಲ ಅವಧಿಯಲ್ಲೂ ಹಗರಣಗಳಿಗೆ ಹೆಸರಾಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಈವರೆಗೂ ಒಂದೇ ಒಂದು ಹಗರಣ ನಡೆಸಿಲ್ಲ, ಯಾವುದೇ ಕಪ್ಪು ಚುಕ್ಕಿ ಇಲ್ಲ ಎಂದರು.
ಶೇಷಗಿರಿ ಮಾತನಾಡಿ, ಕಾಂಗ್ರೆಸ್ ಮುಖಂಡರು ನರೇಂದ್ರ ಮೋದಿ ವಿರುದ್ಧ ಅಪಪ್ರಚಾರ ನಡೆಸುವುದಷ್ಟಕ್ಕೇ ಸೀಮಿತರಾಗಿದ್ದಾರೆ ಎಂದರು. ಬಿಜೆಪಿ ಮುಖಂಡರಾದ ನಾಗೇಶ್, ನಾಗಭೂಷಣ, ಶ್ರೀಕಾಂತ್, ಮಹೇಶ್,ಪರೀಕ್ಷಿತ್, ಲೋಕೇಶ್, ಸುಜಯಾ, ಜೆಡಿಎಸ್ ಮುಖಂಡರಾದ ಮಂಜಪ್ಪಯ್ಯ, ಜ್ವಾಲನಯ್ಯ, ಸಂತೋಷ್ ಭಾಗವಹಿಸಿದ್ದರು.
