ಕಳಸ:ನಮ್ಮ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಒಬ್ಬ ಸಜ್ಜನ, ಅನುಭವಿ, ಸಮರ್ಥ ರಾಜಕಾರಣಿ. ಅವರನ್ನು ಸಂಸತ್ ಚುನಾವಣೆಯಲ್ಲಿ ಗೆಲ್ಲಿಸಿದರೆ ಕ್ಷೇತ್ರದ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತವೆ.ನನ್ನ ಕ್ಷೇತ್ರದಲ್ಲಿ ಇರುವ ಕೃಷಿಕರ ಸಮಸ್ಯೆ, ರಸ್ತೆ, ನೀರು, ವಸತಿಯಂತಹ ಎಲ್ಲ ಸಮಸ್ಯೆ ಪರಿಹಾರಕ್ಕೆ ಹೆಗ್ಡೆಯಂತಹ ಸಂಸದರು ಬೇಕು. ಅವರನ್ನು ಗೆಲ್ಲಿಸಿ ನನ್ನ ಬೆನ್ನು ಗಟ್ಟಿ ಮಾಡಿ ಎಂದು ಶಾಸಕಿ ನಯನಾ ಮೋಟಮ್ಮ ಮತದಾರರಲ್ಲಿ ಕೋರಿದರು.
ಶೋಭಾ ಕರಂದ್ಲಾಜೆ ಯಾವುದೇ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಅವರ ವಿರುದ್ಧ ಗೋ ಬ್ಯಾಕ್ ಅಭಿಯಾನ ಮಾಡಿದ್ದು ಬಿಜೆಪಿ ಕಾರ್ಯಕರ್ತರೇ ಅಲ್ಲವೇ. ಬಿಜೆಪಿಯ ಹೊಸ ಅಭ್ಯರ್ಥಿ ಕೂಡ ಕೆಲಸ ಮಾಡುತ್ತಾರೆ ಎಂಬ ಭರವಸೆ ಇಲ್ಲ. ನಿಮಗೆ ಶೂನ್ಯ ಸಾಧನೆ ಮಾಡುವ ಬಿಜೆಪಿ ಸಂಸದರು ಬೇಕೋ ಅಥವಾ ನಿಮ್ಮೆಲ್ಲರ ಕೆಲಸವನ್ನು ಪಟ್ಟಿ ಮಾಡಿಕೊಂಡು ಅನುಷ್ಟಾನ ಮಾಡುವ ಜಯಪ್ರಕಾಶ್ ಹೆಗ್ಡೆ ಬೇಕೋ ಎಂದು ನೀವೇ ತೀರ್ಮಾನ ಮಾಡಿ ಎಂದು ನಯನಾ ಮೋಟಮ್ಮ ಹೇಳಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜನರು ಆರೋಗ್ಯ ಸಮಸ್ಯೆಯಿಂದ ನನಗೆ ಅನೇಕ ಫೋನ್ ಮಾಡ್ತಾರೆ.ಅವರು ಹಣಕಾಸಿನ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕಷ್ಟ ಪಡುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಆದ್ಯತೆ ನೀಡುತ್ತೇನೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಭರವಸೆ ನೀಡಿದರು.
ಯಾರದೋ ಹೆಸರಲ್ಲಿ ಮತವನ್ನು ಬೇಡಿ, ಗೆದ್ದು 5 ವರ್ಷದ ನಂತರ ನಿಮ್ಮ ಬಳಿಗೆ ಬರುವ ವ್ಯಕ್ತಿ ನಾನಲ್ಲ. ಜನಪರ ಕೆಲಸ ಮಾಡುವ ಭರವಸೆಯೊಂದಿಗೆ ನಿಮ್ಮ ಮತ ಕೇಳುತ್ತಿದ್ದೇನೆ ಎಂದು ಹೆಗ್ಡೆ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಪರೋಕ್ಷ ವಾಗ್ದಾಳಿ ನಡೆಸಿದರು.ನಿಮ್ಮ ಊರಿನ ಕೆಲಸ, ಸಮಸ್ಯೆ ಬಗ್ಗೆ ನನಗೆ ನೇರವಾಗಿ ಫೋನ್ ಮಾಡಿ. ನಿಮ್ಮ ಕೆಲಸ ಮಾಡಿಕೊಡಲು ಬದ್ಧವಾಗಿದ್ದೇನೆ ಎಂದೂ ಹೆಗ್ಡೆ ಭರವಸೆ ನೀಡಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಂಶುಮಂತ್ ಮಾತನಾಡಿ, ವಿಧಾನಸಭೆಯಲ್ಲಿ ನಿಮ್ಮ ಕ್ಷೇತ್ರದ ನಿವೇಶನರಹಿತರ, ರೈತರ ಸಂಕಷ್ಟದ ಬಗ್ಗೆ ನಯನಾ ಮೋಟಮ್ಮ ದನಿ ಆಗುತ್ತಿದ್ದಾರೆ.ಇದೇ ಬಗೆಯಲ್ಲಿ ಸಂಸತ್ತಿನಲ್ಲಿ ನಿಮ್ಮ ಪರ ದನಿ ಎತ್ತಲು ಜಯಪ್ರಕಾಶ್ ಹೆಗ್ಡೆ ಅವರನ್ನು ಆರಿಸಿ ಕಳಿಸಿ. ಸಮರ್ಥ ಅಭ್ಯರ್ಥಿ ಆಯ್ಕೆಯಿಂದ ದೇಶ ಅಭಿವೃದ್ಧಿ ಆಗುತ್ತದೆ.ಬರೀ ಘೋಷಣೆಗಳಿಂದ ಅಲ್ಲ ಎಂದು ಮನವಿ ಮಾಡಿದರು.
ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಶೋಭಾ ಕರಂದ್ಲಾಜೆ ಕಳೆದ 10 ವರ್ಷ ಕ್ಷೇತ್ರದಲ್ಲಿ ಮಾಡಿರುವ ಒಂದು ಕೆಲಸದ ಬಗ್ಗೆ ಬಿಜೆಪಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಮೋದಿ ಯುವಜನರನ್ನು ಮರಳು ಮಾಡಿ ಮತ ಕೇಳುವುದನ್ನು ಕಲಿತಿದ್ದಾರೆ.ಯುವಜನರಿಗೆ ಉದ್ಯೋಗ ಕೊಡುವ ಬದಲು ಧರ್ಮದ ಹೆಸರಲ್ಲಿ ಮಂಕುಬೂದಿ ಎರಚುತ್ತಾರೆ. ಹಿಂದೂ ಧರ್ಮವನ್ನು ಇವರಿಗೆ ಗುತ್ತಿಗೆ ಕೊಟ್ಟಿದ್ದು ಯಾರು ಎಂದು ಕಿಡಿಕಾರಿದರು.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಬಿಜೆಪಿ ಪಕ್ಷವನ್ನು ಎಲ್ಲ ಗುಡಿಸಲುಗಳಿಗೆ ತೆಗೆದುಕೊಂಡು ಹೋಗಿ ನಾನು ತಪ್ಪು ಮಾಡಿಬಿಟ್ಟೆ.ಈಗ ಮನೆ ಮನೆಗೂ ನಾನೇ ಬಂದು ನಿಮ್ಮೆಲ್ಲರನ್ನು ಕಾಂಗ್ರೆಸ್ಗೆ ಮರಳಿ ಕರೆತರುತ್ತೇನೆ ಎಂದರು.
ಕೆಪಿಸಿಸಿ ಸದಸ್ಯ ಪ್ರಭಾಕರ್ ಮಾತನಾಡಿ, ಶೋಭಾ ಕರಂದ್ಲಾಜೆ ಕೃಷಿ ಸಚಿವೆ ಆಗಿದ್ದರೂ ಕೃಷಿಕರ ಪರವಾಗಿ ಸಂಸತ್ತಿನಲ್ಲಿ ಒಂದು ಮಾತೂ ಆಡಲಿಲ್ಲ. ಸರ್ಫೇಸಿ ಕಾಯ್ದೆ ಮೂಲಕ ಬೆಳೆಗಾರರ ತೋಟಗಳು ಹರಾಜು ಆಗುತ್ತಿದ್ದರೂ ಕೈಕಟ್ಟಿ ಕುಳಿತರು ಎಂದು ಟೀಕಿಸಿದರು.
ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ ಮಾತನಾಡಿ,ರಾಜ್ಯದಲ್ಲಿ ಗೆದ್ದಿರುವ ಬಿಜೆಪಿ ಸಂಸದರು ಮೇಜು ಗುದ್ದಿದ್ದು ಬಿಟ್ಟರೆ ಬೇರೆ ಯಾವ ಸಾಧನೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮುಖಂಡರಾದ ಹಿತ್ತಲಮಕ್ಕಿ ರಾಜೇಂದ್ರ, ರಫೀಕ್, ವೀರೇಂದ್ರ, ವಿಶ್ವನಾಥ್, ಸುಜಿತ್ ಭಾಗವಹಿಸಿದ್ದರು.ಕೆ.ಕೆಳಗೂರು, ಕಳಕೋಡು, ಜಾಂಬಳೆ,ನೆಲ್ಲಿಬೀಡು, ಸಂಸೆಯ ಚಲ್ಲು, ನವೀನ್, ಪ್ರಭಾಕರ್,ಸುದರ್ಶನ್, ನಟೇಶ್ ಮತ್ತಿತರ ಅನೇಕ ಯುವಕರು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದರು.
