ಕಳಸ:ಕಳಸ ತಾಲ್ಲೂಕು ವಿಚಾರದಲ್ಲಿ ರಾಜಕೀಯ ಕಾರಣಕ್ಕೆ ಹೋರಾಟ ನಡೆಸಿದರೆ ನಾವು ಕೂಡ ರಾಜಕೀಯವಾಗಿಯೇ ಉತ್ತರ ನೀಡಬೇಕಾಗುತ್ತದೆ.ಕಳೆದ 20 ವರ್ಷದಿಂದ ಕ್ಷೇತ್ರದಲ್ಲಿ ನಡೆದಿರುವ ಭ್ರಷ್ಟಾಚಾರದ ಕಾರಣಕ್ಕೆ ಕಳಸದಲ್ಲಿ ಇಷ್ಟೆಲ್ಲಾ ಸಮಸ್ಯೆ ಆಗಿದೆ. 7 ಜನ ತಹಶೀಲ್ದಾರರು ಇಲ್ಲಿಗೆ ಬಂದು ಹೋಗಿದ್ದು ಹೌದು.ಏಕೆಂದರೆ ಇಲ್ಲಿಗೆ ಯಾವುದೇ ದಕ್ಷ ಅಧಿಕಾರಿ ಬರಲು ಒಪ್ಪುತ್ತಿಲ್ಲ.ಇಲ್ಲಿನ ಎಲ್ಲ ಸಮಸ್ಯೆಗಳನ್ನು ಒಂದೇ ವರ್ಷದಲ್ಲಿ ಬಗೆಹರಿಸಲು ಅಗುತ್ತದೆಯೇ ಎಂದು ಶಾಸಕಿ ನಯನಾ ಮೋಟಮ್ಮ ಪ್ರಶ್ನಿಸಿದರು.
ಪಟ್ಟಣದ ಅರಮನೆಮಕ್ಕಿ ಸಮೀಪ ಕಳಸ ತಾಲ್ಲೂಕು ಪಂಚಾಯಿತಿ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಳಸ ತಾಲ್ಲೂಕು ಕೇಂದ್ರದ ಸಮಗ್ರ ಅಭಿವೃದ್ಧಿ ಚಿಂತನೆ ಒಂದು ದಿನದಲ್ಲಿ ಮುಗಿಯುವ ಕೆಲಸ ಅಲ್ಲ. 5 ವರ್ಷದ ನನ್ನ ಅವಧಿ ಮುಗಿಯುವ ಒಳಗೆ ಕಳಸ ತಾಲ್ಲೂಕಿಗೆ ಬೇಕಾದ ಎಲ್ಲ ಸೌಲಭ್ಯ ಕಲ್ಪಿಸಿ ಮಾದರಿ ತಾಲ್ಲೂಕು ಮಾಡುವ ದೊಡ್ಡ ಕನಸು ಹೊಂದಿದ್ದೇನೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಕಳಸ ತಾಲ್ಲೂಕು ಕಚೇರಿಗೆ ಬೇಕಾದ ಭೂಮಿಯ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ.ಕಳಸದಲ್ಲಿ ವಿವಿಧ ಇಲಾಖೆಗಳ ಕಚೇರಿ ಆರಂಭಕ್ಕೆ ಬೇಕಾದ ಎಲ್ಲ ಸೌಕರ್ಯ ಮಾಡಿಕೊಡಲು ಬದ್ಧರಾಗಿದ್ದೇವೆ.ಇದೇ ಕಾರಣಕ್ಕೆ ಕಳಸ ತಾಲ್ಲೂಕು ಮಟ್ಟದ ಕೆಡಿಪಿ ಸಭೆ ಸದ್ಯದಲ್ಲೇ ನಡೆಸಲಾಗುತ್ತದೆ ಎಂದೂ ಅವರು ಪ್ರಕಟಿಸಿದರು.
ಕಾರ್ಯನಿರ್ವಹಣಾಧಿಕಾರಿ ದಯಾವತಿ ಮಾತನಾಡಿ, ಎಲ್ಲ ಇಲಾಖೆಗಳ ಅದಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಕೆಲಸ ಮಾಡಿದರೆ ಕಳಸ ಮಾದರಿ ತಾಲ್ಲೂಕು ಆಗಲಿದೆ.ಎಲ್ಲರ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕೆಲಸ ನಡೆಯಬೇಕಿದೆ ಎಂದರು.
ಜಿ.ಪಂ ಮಾಜಿ ಸದಸ್ಯ ಪ್ರಭಾಕರ್ ಮಾತನಾಡಿ, ಕಳಸದಲ್ಲಿ 32 ಇಲಾಖೆಗಳ ಕಚೇರಿಗೆಂದು 40 ಎಕರೆ ಭೂಮಿ ಗಣಪತಿಕಟ್ಟೆ ಬಳಿ ಕೇಳಿದ್ದೇವೆ.ಅದು ಮಂಜೂರಾಗಲಿದೆ.ಇಲ್ಲಿಗೆ ಬರುವ ಎಲ್ಲ ಅಧಿಕಾರಿಗಳ ಮೂಲಕ ಜನರ ಕೆಲಸ ಮಾಡಿಸಲು ಬುದ್ಧಿವಂತಿಕೆ ತೋರಿಸೋಣ, ರಾಜಕೀಯ ಉದ್ದೇಶದ ಹೋರಾಟಕ್ಕೆ ಅಲ್ಲ ಎಂದರು.
ಮುಖಂಡ ಕೆ.ಸಿ.ಧರಣೇಂದ್ರ ಮಾತನಾಡಿ, ಕಳಸದಲ್ಲಿ ಭದ್ರಾ ಮೇಲ್ದಂಡೆ ವಿಚಾರದಲ್ಲಿ ನಡೆದ ಹೋರಾಟ ಫಲ ಕೊಟ್ಟಿತ್ತು.ಆದರೆ ಇದೀಗ ಕಳಸ ತಾಲ್ಲೂಕು ಘೋಷಣೆ ಆದ ನಂತರವೂ ಹೋರಾಟದ ಪ್ರಸ್ತಾಪ ಬಂದಿರುವುದು ಹಾಸ್ಯಾಸ್ಪದ ಎಂದರು.
ಕಳಸ ಪಂಚಾಯಿತಿ ಅಧ್ಯಕ್ಷೆ ಉಷಾ ವಿಶ್ವನಾಥ್, ಮರಸಣಿಗೆ ಅಧ್ಯಕ್ಷೆ ಹೇಮಾವತಿ, ಮುಖಂಡರಾದ ಶ್ರೇಣಿಕ, ರಾಜೇಂದ್ರ, ರಫೀಕ್, ವೀರೇಂದ್ರ, ವಿಶ್ವನಾಥ್, ಜ್ವಾಲನಯ್ಯ ಇದ್ದರು.
