ಕಳಸ:ಕಳಸ ತಾಲ್ಲೂಕು ಕೇಂದ್ರದ ಅಭಿವೃದ್ಧಿ ಬಗ್ಗೆ ಹೋರಾಟದ ಸೂಚನೆ ನೀಡಿದ್ದ ಕಳಸ ತಾಲ್ಲೂಕು ಅಭಿವೃದ್ಧಿ ಸಮಿತಿಯು ಅದಕ್ಕೂ ಮುನ್ನ ಕಂದಾಯ ಸಚಿವರ ಬಳಿಗೆ ನಿಯೋಗ ಕರೆದೊಯ್ಯುವ ಬದಲಿ ಮಾರ್ಗ ಅನುಸರಿಸಲು ತೀರ್ಮಾನಿಸಿದೆ.
ಭಾನುವಾರ ಕಳಸ ಸಹಕಾರ ಸಂಘದಲ್ಲಿ ಭಾನುವಾರ ನಡೆದ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗಿದೆ.ಸಮಿತಿ ಅಧ್ಯಕ್ಷ ಮಂಜಪ್ಪಯ್ಯ ಮಾತನಾಡಿ, ಸಂಸದ ಶ್ರೀನಿವಾಸ ಪೂಜಾರಿ ಕಳಸ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಹೋರಾಟ ರೂಪಿಸುವ ಮುನ್ನ ಕಂದಾಯ ಸಚಿವರ ಬಳಿಗೆ ನಿಯೋಗ ಕರೆದೊಯ್ಯುವ ಸಲಹೆ ನೀಡಿದ್ದಾರೆ. ಈ ಪ್ರಯತ್ನ ಫಲ ನೀಡದಿದ್ದರೆ ಮಾತ್ರ ಹೋರಾಟದ ಹಾದಿ ಹಿಡಿಯುವಂತೆ ಸೂಚನೆ ನೀಡಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯರಾದ ಭೋಜೇಗೌಡ ಕೂಡ ನಿಯೋಗದ ಜೊತೆಗೆ ಬರುವುದಾಗಿ ಭರವಸೆ ನೀಡಿದ್ದಾರೆ.ಕಂದಾಯ ಇಲಾಖೆಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿದ ನಂತರ ಜಿಲ್ಲಾಧಿಕಾರಿಗಳ ಭೇಟಿ ಮಾಡಿ ತಾಲ್ಲೂಕು ಕೇಂದ್ರಕ್ಕೆ ಭೂಮಿ ಕೊಡುವಂತೆ ಆಗ್ರಹಿಸಲಾಗುವುದು ಎಂದೂ ಮಂಜಪ್ಪಯ್ಯ ಹೇಳಿದರು.
ಬಿಜೆಪಿ ಮುಖಂಡ ಶೇಷಗಿರಿ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕೂಡ ಕಳಸ ತಾಲ್ಲೂಕಿಗೆ ಅಗತ್ಯ ಬೆಂಬಲ ಕೊಡುವ ಭರವಸೆ ನೀಡಿದ್ದಾರೆ. ವಿಧಾನಪರಿಷತ್ತಿನಲ್ಲಿ ಈ ಬಗ್ಗೆ ದನಿ ಎತ್ತುವುದಾಗಿ ಸಿ.ಟಿ. ರವಿ ಹೇಳಿದ್ದಾರೆ. ವಿಧಾನ ಪರಿಷತ್ ಉಪಸಭಾಪತಿ ಪ್ರಾಣೇಶ್ ಕೂಡ ಕಳಸ ತಾಲ್ಲೂಕು ಕೇಂದ್ರದ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದರು.
ಈ ಪ್ರಯತ್ನಗಳು ಫಲ ಕೊಡದಿದ್ದಲ್ಲಿ ಕಳಸ ತಾಲ್ಲೂಕು ಕೇಂದ್ರದ ಅಭಿವೃದ್ಧಿಯಲ್ಲಿ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಯಿತು. ಲೋಕಾಯುಕ್ತರಿಗೂ ಈ ಬಗ್ಗೆ ದೂರು ಕೊಡುವ ಸಾಧ್ಯತೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಯಿತು.
ವಿವಿಧ ಸಂಘಟನೆಗಳ ಮುಖಂಡರಾದ ಸಂತೋಷ್, ಗೋಪಾಲ ಶೆಟ್ಟಿ, ಲಕ್ಷ್ಮಣಾಚಾರ್, ನಾಗಭೂಷಣ್, ನಾಗೇಶ್, ವೆಂಕಟಸುಬ್ಬಯ್ಯ, ರಂಗನಾಥ್, ಕುಮಾರಸ್ವಾಮಿ ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
