ಕಳಸ:ಅವೈಜ್ಞಾನಿಕವಾಗಿ ನಿರ್ಮಿಸಿದ ತಡೆಗೋಡೆ ಕುಸಿದು ಮನೆ ಮತ್ತು ಜೀಪಿಗೆ ಹಾನಿ ಸಂಭವಿಸಿದ ಘಟನೆ ಗುರುವಾರ ಬೆಳಿಗ್ಗೆ ಕಚಗಾನೆಯಲ್ಲಿ ನಡೆದಿದೆ.
ಕಳಸ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಂಗನಾಥ್ ಮನೆ ಪಕ್ಕದಲ್ಲಿ ಕಳೆದ ವರ್ಷ ರಸ್ತೆಗೆ ಆಧಾರವಾಗಿ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗವು ಎರಡು ತಡೆಗೋಡೆಗಳನ್ನು ಹೊಸದಾಗಿ ನಿರ್ಮಿಸಿದ್ದರೆ ಒಂದು ತಡೆಗೋಡೆಯನ್ನು ಹಳೆ ತಡೆಗೋಡೆಯ ಮೇಲೆ ನಿರ್ಮಾಣ ಮಾಡಿತ್ತು.

ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದವರೆಗೆ ಕಳಸದಲ್ಲಿ ಭಾರಿ ಮಳೆ ಸುರಿದಿತ್ತು.
ತಡೆಗೋಡೆಯ ಬದಿಗೆ ಹಾಕಿದ್ದ ಮಣ್ಣಿನ ಭಾರ ತಾಳಲಾರದೆ ಬೆಳಿಗ್ಗೆ 8 ಗಂಟೆಗೆ ಈ ತಡೆಗೋಡೆ ಕುಸಿದು ಬಿದ್ದಿದೆ.ರಂಗನಾಥ್ ಅವರ ಮನೆಯ ಒಂದು ಬದಿಯ ಕಾಂಕ್ರೀಟ್ ಛಾವಣಿ, ಮನೆಯ ಮೆಟ್ಟಿಲುಗಳಿಗೆ ಹಾನಿ ಆಗಿದೆ. ತಡೆಗೋಡೆಯ ಒಂದು ಭಾಗ ಅವರ ಜೀಪ್ ಮೇಲೆ ಬಿದ್ದಿದ್ದು ಜೀಪ್ ನಜ್ಜುಗುಜ್ಜಾಗಿದೆ.

ಈ ತಡೆಗೋಡೆ ತಾಂತ್ರಿಕ ಸಮಸ್ಯೆಯಿಂದ ಬಿದ್ದಿರಬೇಕು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಅವರೇ ಸ್ಪಷ್ಟನೆ ಕೊಡಬೇಕು. ನಮಗೆ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ ಎಂದು ರಂಗನಾಥ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಕಿರಿಯ ಎಂಜಿನಿಯರ್ ನಟರಾಜ್ ಅವರನ್ನು ಈ ತಡೆಗೋಡೆಯ ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದಾಗ ಅವರು,ಈಗ ಬಿದ್ದಿರುವ ತಡೆಗೋಡೆಯನ್ನು ಈ ಹಿಂದೆ ಇದ್ದ ತಡೆಗೋಡೆ ಮೇಲೆ ನಿರ್ಮಾಣ ಮಾಡಿದ್ದೆವು.ಅಲ್ಲಿ ಈಗ ಏನು ಮಾಡಬೇಕು ಎಂಬ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ನಂತರ ತಿಳಿಸುತ್ತೇನೆ ಎಂದರು.
